ಬಿಜೆಪಿಯದ್ದು ಕೌರವರ ಪಕ್ಷ, ಕಾಂಗ್ರೆಸ್‌ ಪಾಂಡವರ ಪಕ್ಷ: ರಾಹುಲ್‌ ಗಾಂಧಿ ವಾಗ್ದಾಳಿ

10:31 AM, Wednesday, March 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

rahul-gandhiಮಂಗಳೂರು: ಬಿಜೆಪಿ ಕೌರವರ ಪಕ್ಷ, ಕಾಂಗ್ರೆಸ್ ಪಾಂಡವರ ಪಕ್ಷ. ಬಿಜೆಪಿಯದ್ದು ಸುಳ್ಳಿನ ಹಾದಿ, ಕಾಂಗ್ರೆಸ್‌ನದ್ದು ಸತ್ಯದ ನಡೆ ಎಂದು ಇಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಬ್ಬರಿಸಿದರು.

ಕರಾವಳಿ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ರಾಹುಲ್, ಜನಾಶೀರ್ವಾದ ರೋಡ್ ಶೋ ನಡೆಸಿದ ಬಳಿಕ ನೆಹರೂ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದರು. ಕೌರವರಿಗೆ ಯುದ್ಧ ಗೆಲ್ಲಲು ಬೇಕಾದ ಎಲ್ಲ ತಂತ್ರಗಳು, ಸೈನ್ಯ ಬಲವೂ ಇತ್ತು. ಕೊನೆಗೆ ಸತ್ಯದ ಹಾದಿಯಲ್ಲಿ ಪಾಂಡವರು ಗೆದ್ದರು ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.

rahul-gandhi-2ಅಧಿಕಾರಕ್ಕಾಗಿ ಬಿಜೆಪಿ ಯಾವ ಹಂತಕ್ಕೂ ಹೋಗುತ್ತದೆ. ಬಿಜೆಪಿ ಹಣ ಚೆಲ್ಲಿ ಅಧಿಕಾರಕ್ಕೆ ಬರುತ್ತಿದೆ ಎಂದು ಆರೋಪಿಸಿದರು. ಶಾಸಕರನ್ನು ಖರೀದಿಸಿ ಗೋವಾ, ಮೇಘಾಲಯ, ಮಣಿಪುರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ ಎಂದು ವಾಗ್ದಾಳಿ ನಡೆಸಿದರು. ಯುವ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ, ವರ್ಷಕ್ಕೆ ಎರಡು ಕೋಟಿ ಯುವ ಜನತೆಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಕನಿಷ್ಠ ಲಕ್ಷ ಯುವಕರಿಗೂ ಉದ್ಯೋಗ ನೀಡಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಜಮೆ ಮಾಡುವುದಾಗಿ ಹೇಳಿದ್ದರು. ಎಲ್ಲಿದೆ 15 ಲಕ್ಷ ಎಂದು ಪ್ರಶ್ನಿಸಿದರು.

ಬಸವಣ್ಣನವರ ಮಾತನ್ನು ನೆನೆದು, ಮೋದಿಜಿಯವರೇ `ನುಡಿದಂತೆ ನಡೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೋದಿ ನೋಟ್ ಬ್ಯಾನ್‌ನಿಂದ ಮೋದಿಯ ಸ್ನೇಹಿತರಿಗೆ ಅನುಕೂಲವಾಯಿತೇ ಹೊರತು ಜನಸಾಮಾನ್ಯರಿಗಲ್ಲ. ಮೋದಿ ಗೆಳೆಯರು ಅವರ ಕಚೇರಿಯಲ್ಲಿನ ಕಪ್ಪು ಹಣವನ್ನು ಬಿಳಿಯನ್ನಾಗಿಸಿಕೊಂಡರು ಎಂದು ಆರೋಪಿಸಿದರು. ಜಿಎಸ್‌‌ಟಿ ಜಾರಿಯಿಂದಲೂ ಲಕ್ಷಾಂತರ ಜನಕ್ಕೆ ತೊಂದರೆಯಾಗಿದೆ. ಅಮಿತ್ ಶಾ ಮಗನ ಆಸ್ತಿ ಏರಿಕೆ, ರಫೆಲ್ ಹಗರಣದ ಬಗ್ಗೆ ಮೋದಿ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

rahul-gandhi-3ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಸವಣ್ಣ, ನಾರಾಯಣ ಗುರುಗಳ ನುಡಿದಂತೆ ನಡೆ ಮಾತಿನಂತೆ ನಾವು ನಡೆದುಕೊಳ್ಳುತ್ತೇವೆ. ಮೀನುಗಾರರ ಸಮಸ್ಯೆ ಪರಿಹರಿಸಲು ಪ್ರತ್ಯೇಕ ಸಚಿವಾಲಯ ರಚಿಸುತ್ತೇವೆ ಎಂದು ಭರವಸೆ ನೀಡಿದರು. ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಕಾಂಗ್ರೆಸ್‌‌‌‌ನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English