ಬೆಂಗಳೂರು: ಸ್ಥಳೀಯ ಕಾರ್ಯಕರ್ತರ ತೀವ್ರ ವಿರೋಧದ ನಡುವೆಯೂ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಮಾಜಿ ಸಚಿವ ವೆಂಕಟರಮಣಪ್ಪ ಅವರ ಪುತ್ರ ಕುಮಾರಸ್ವಾಮಿ ಹಾಗೂ ಮಧುಗಿರಿ ಮಾಜಿ ಶಾಸಕ ಗಂಗಹನುಮಯ್ ಮತ್ತಿತರರು ಬಿಜೆಪಿಗೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು.
ಮಲ್ಲೇಶ್ವರಂನ ಕಚೇರಿಯಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಹಲವು ಮುಖಂಡರ ಸಮ್ಮುಖದಲ್ಲಿ ಈ ಮೂವರನ್ನು ಬಿಜೆಪಿ ಬಾವುಟ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಇಂದು ಬಿಜೆಪಿಗೆ ಸೇರ್ಪಡೆಯಾದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಅವರಿಗೆ ಆರಂಭದಲ್ಲೇ ಭಾರೀ ವಿರೋಧ ವ್ಯಕ್ತವಾಯಿತು. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಂತೆ ವಿಜಯಪುರ ಜಿಲ್ಲೆಯ ಅನೇಕ ಕಾರ್ಯಕರ್ತರು ಪಕ್ಷದ ಮುಖಂಡರಿಗೆ ಒತ್ತಾಯಿಸಿದರು. ಮುದ್ದೆಬಿಹಾಳದ ಬಿಜೆಪಿ ಮುಖಂಡರಾದ ಆರ್.ಎಸ್.ಪಾಟೀಲ ಕುಚಬಾಳ, ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮುಖಂಡ ಎಂ.ಎಸ್.ಪಾಟೀಲ್ ಸೇರಿದಂತೆ ಮತ್ತಿತರರು ವಿರೋಧ ವ್ಯಕ್ತಪಡಿಸಿದರು.
ಆದರೆ, ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಬೇಕಾದ ಅಗತ್ಯವಿರುವುದರಿಂದ ಸ್ಥಳೀಯರ ವಿರೋಧವನ್ನೂ ಲೆಕ್ಕಿಸದೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ಈ ಹಿಂದೆ ಕಾಂಗ್ರೆಸ್‍ನಿಂದ ಗೆದ್ದಿದ್ದ ನಡಹಳ್ಳಿ ಪ್ರತ್ಯೇಕ ಉತ್ತರ ಕರ್ನಾಟಕ ರಚನೆಯಾಗಬೇಕೆಂಬ ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್‍ನಿಂದ ಅವರನ್ನು ಉಚ್ಛಾಟಿಸಲಾಗಿತ್ತು. ಬಳಿಕ ನಡಹಳ್ಳಿ ಜೆಡಿಎಸ್‍ಗೆ ಸೇರ್ಪಡೆಯಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ, ನಡಹಳ್ಳಿ ಅವರಿಗೆ ದೇವರಹಿಪ್ಪರಗಿ ಬದಲು ಜೆಡಿಎಸ್ ನಾಯಕರು ಮುದ್ದೆಬಿಹಾಳದಿಂದ ಟಿಕೆಟ್ ನೀಡಿದ್ದರು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಇನ್ನು ಪಾವಗಡದಲ್ಲಿ ಈ ಬಾರಿ ಅಪ್ಪ-ಮಕ್ಕಳೇ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಮಾಜಿ ಸಚಿವ ವೆಂಕಟರಮಣಪ್ಪ ಕಾಂಗ್ರೆಸ್‍ನಿಂದ ಸ್ಪರ್ಧಿಸಿದರೆ, ಅವರ ಪುತ್ರ ಕುಮಾರಸ್ವಾಮಿ ಬಿಜೆಪಿಯಿಂದ ಅಖಾಡಕ್ಕಿಳಿಯಲಿದ್ದಾರೆ. ಹೀಗಾಗಿ ಪಾವಗಡ ಈ ಬಾರಿ ರಾಜ್ಯದ ಗಮನ ಸೆಳೆಯುವ ಕ್ಷೇತ್ರವಾಗಲಿದೆ.
Click this button or press Ctrl+G to toggle between Kannada and English