ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಲಾದ ಬೆಳ್ಳಿರಥ ಮಂದಿರವನ್ನು ಶುಕ್ರವಾರ ಸಚಿವ ಬಿ. ಜನಾರ್ದನ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶತಮಾನದ ಹಿಂದೆ ಸ್ಥಾಪಿಸಿದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿಯವರ ಆಶಯದಂತೆ ಕ್ಷೇತ್ರವು ಸಮಾಜದ ಸರ್ವರಿಗೂ ಆತ್ಮವಿಶ್ವಾಸ ನೀಡುವ ಶ್ರದ್ಧಾಕೇಂದ್ರವಾಗಿದೆ ಎಂದರು.
ದೇಶವಿದೇಶಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಕ್ಷೇತ್ರವು ಧಾರ್ಮಿಕ ಆಚರಣೆಗಳ ಜತೆಗೆ ಸಮಾಜದ ಅಗತ್ಯಗಳಿಗೂ ಸ್ಪಂದಿಸುತ್ತಿದೆ. ಅದರ ಜೊತೆಗೆ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದು ಪೂಜಾರಿ ವಿವರಿಸಿದರು.
ಜಯ ಸಿ. ಸುವರ್ಣ, ಕೆ.ಪಿ. ನಂಜುಂಡಿ, ರಮೇಶ್ ಕುಮಾರ್, ಉರ್ಮಿಳಾ ರಮೇಶ್‌ಕುಮಾರ್, ವೇದಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕುದ್ರೋಳಿ ಕ್ಷೇತ್ರ ವರ್ಣಮಯ ವಿದ್ಯುದ್ದೀಪಾಲಂಕಾರದಿಂದ ಅಲಂಕಾರಗೊಂಡಿದ್ದು ಉತ್ಸವಕ್ಕಾಗಿ ಭಕ್ತ ಜನಸಾಗರವೇ ಹರಿದು ಬರುತ್ತಿದೆ. ಗಂಗಾವತರಣ, ಕ್ಷೇತ್ರದ ವಿವಿಧ ದೇವದೇವತೆಗಳ ಸಾನ್ನಿಧ್ಯಗಳೆಲ್ಲಾ ಶೃಂಗಾರಗೊಂಡು ಆಕರ್ಷಣೆ ಮತ್ತಷ್ಟು ಹೆಚ್ಚಿದೆ.
ಮಂಗಳೂರು ದಸರಾಕ್ಕೆ ಮಂಗಳೂರು ನಗರ ಪೂರ್ತಿ ಶೃಂಗಾರಗೊಂಡಿದ್ದು. ನಗರದಾದ್ಯಂತ ವರ್ಣಮಯ ವಿದ್ಯುದ್ದೀಪಗಳ ಅಲಂಕಾರವನ್ನು ಮಾಡಲಾಗಿದೆ. ನಗರದ ಪ್ರತಿ ಬೀದಿಯೂ ಕಂಗೊಳಿಸುತ್ತಿದೆ. ಮನೆಗಳು, ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳು ಕೂಡಾ ಅಲಂಕೃತವಾಗಿವೆ.