ಬೆಂಗಳೂರು: ಚೆಕ್ ಬೌನ್ಸ್ ಕೇಸ್‌ನಲ್ಲಿ ಚಿತ್ರ ನಿರ್ಮಾಪಕಿ ಜಯಶ್ರೀ ದೇವಿಯನ್ನು ಬೆಂಗಳೂರಿನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮುಕುಂದ ಮುರಾರಿ ಸೇರಿದಂತೆ 25 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದ ಜಯಶ್ರೀ ದೇವಿ ಹಳೆಯ ಚೆಕ್ ಬೌನ್ಸ್ ಕೇಸ್ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. 50ಕ್ಕೂ ಹೆಚ್ಚು ಲಕ್ಷ ರೂ. ಸಾಲಕ್ಕಾಗಿ ನೀಡಿದ್ದ ಚೆಕ್ ಬೌನ್ಸ್ ಆಗಿರುವುದಲ್ಲದೆ, ಸುಮಾರು ವರ್ಷಗಳಿಂದ ಸಾಲದ ಹಣ ನೀಡದೆ ವಂಚಿಸಿದ ಆರೋಪದ ಮೇಲೆ ಜಯಶ್ರೀ ದೇವಿ ಅವರನ್ನು ಬಂಧಿಸಲಾಗಿದೆ. ಜಯಶ್ರೀ ದೇವಿ “ಹಬ್ಬ” ಸಿನಿಮಾ ನಿರ್ಮಾಣಕ್ಕೆ ಅಶ್ವಿನಿ ಫಿಕ್ಚರ್ಸ್ ಸಂಸ್ಥೆ ಮಾಲೀಕ ಆನಂದ್ ಬಳಿ 53 ಲಕ್ಷ ಸಾಲ ಪಡೆದಿದ್ದರು.
ಹಲವು ವರ್ಷಗಳ ಹಿಂದೆ ಪಡೆದಿದ್ದ ಸಾಲವನ್ನು ವಾಪಸ್ ನೀಡದೇ ಜಯಶ್ರೀ ದೇವಿ ಸತಾಯಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಅಶ್ವಿನಿ ಪಿಕ್ಚರ್ಸ್ ಸಂಸ್ಥೆ ಮಾಲೀಕ ಆನಂದ್ 18ನೇ ಎಸಿಎಂಎಂ ಕೋರ್ಟ್ಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ಜಯಶ್ರೀಗೆ ಸಮನ್ಸ್ ನೀಡಿತ್ತು. ಇಷ್ಟಾದರೂ ಜಯಶ್ರೀ ದೇವಿ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿ ಮುಂದಿನ ಕ್ರಮಕ್ಕಾಗಿ ಚಾಮರಾಜಪೇಟೆ ಪೊಲೀಸರಿಗೆ ಆದೇಶಿಸಿತ್ತು.
ಕೋರ್ಟ್ ಆದೇಶದ ಹಿನ್ನೆಲೆ ಚಾಮರಾಜಪೇಟೆ ಪೊಲೀಸರು ಇಂದು ನಿರ್ಮಾಪಕಿ ಜಯಶ್ರೀ ದೇವಿಯನ್ನು ಬಂಧಿಸಿದ್ದಾರೆ. ನಮ್ಮೂರ ಮಂದಾರ ಹೂವೇ, ಹಬ್ಬ, ಸ್ನೇಹಲೋಕ, ಅಮೃತ ವರ್ಷಿಣಿ, ಮುಕುಂದ ಮುರಾರಿ ಸೇರಿದಂತೆ 25 ಕ್ಕೂ ಹೆಚ್ಚು ಚಿತ್ರಗಳನ್ನು ಜಯಶ್ರೀ ದೇವಿ ನಿರ್ಮಿಸಿದ್ದಾರೆ.
Click this button or press Ctrl+G to toggle between Kannada and English