ಮಂಗಳೂರು: ಕೋಸ್ಟ್ ಗಾರ್ಡ್ (ಕರಾವಳಿ ತಟ ರಕ್ಷಣಾ ಪಡೆ) ರಾಷ್ಟ್ರೀಯ ತರಬೇತಿ ಅಕಾಡೆಮಿ ಕೇರಳದಿಂದ ಮಂಗಳೂರಿಗೆ ಸ್ಥಳಾಂತರಗೊಂಡಿದ್ದು, ಇದಕ್ಕೆ ರಾಜ್ಯ ಸರಕಾರ 200 ಎಕರೆಗೂ ಅಧಿಕ ಜಾಗ ಮೀಸಲಿರಿಸಿದೆ ಹಾಗೂ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ. ಈ ಅಕಾಡೆಮಿ ಮಂಗಳೂರಿಗೆ ಬರುವುದರಿಂದ ಕೋಸ್ಟ್ ಗಾರ್ಡ್‌ಗೆ ಎಲ್ಲ ರೀತಿಯ ಸವಲತ್ತುಗಳೂ ಲಭ್ಯವಾಗಲಿವೆ.
ಸುಸಜ್ಜಿತ ಸೌಲಭ್ಯಗಳಿಂದ ಅತ್ಯುತ್ತಮವಾಗಿ ರಕ್ಷಣಾ ಕಾರ್ಯ ನಡೆಸಲು ಅನುಕೂಲವಾಗಲಿದೆ. ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ತರಬೇತಿ ನೀಡಲು ಮತ್ತು ಪಡೆಯಲು ಇಲ್ಲಿ ಅವಕಾಶ ಸಿಗಲಿದೆ ಎಂದವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದ.ಕ. ಜಿಲ್ಲೆಯ ಜನರ ಬೇಡಿಕೆಯ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ನ ತಿಂಡಿ, ಊಟದ ಮೆನು ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ಇಡ್ಲಿ ಚಟ್ನಿ, ಖಾರಾಬಾತ್ ಹಾಗೂ ಇತರ ತಿಂಡಿಗಳಿರುತ್ತವೆ. ಮಧ್ಯಾಹ್ನ ಕುಚ್ಚಲಕ್ಕಿ ಅನ್ನ ಮಾತ್ರವಲ್ಲದೆ, ಪಲ್ಯ ಮತ್ತು ಉಪ್ಪಿನಕಾಯಿಯನ್ನು ಪ್ರತ್ಯೇಕವಾಗಿ ಸೇರಿಸಲಾಗಿದೆ. ಜಿಲ್ಲೆಯಎಲ್ಲ ಇಂದಿರಾ ಕ್ಯಾಂಟೀನ್‌ಗಳಿಗೆ ಇದು ಅನ್ವಯಿಸುತ್ತದೆ ಎಂದು ಸಚಿವ ಖಾದರ್ ವಿವರಿಸಿದರು.
ಇಂದಿರಾ ಕ್ಯಾಂಟೀನ್‌ನ ಬೆಳಗ್ಗಿನ ವೇಳೆಯನ್ನೂ ಬದಲಾಯಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಈಗ ಬೆಳಗ್ಗೆ 8ರಿಂದ 10 ಗಂಟೆವರೆಗೆ ಸಮಯವಿದ್ದು, ಅದನ್ನು 7ರಿಂದ 9.30 ಮಾಡಲಾಗುವುದು. ಕಾರ್ಮಿಕರು ಹಾಗೂ ಇತರ ಕೆಲಸಗಾರರು ಬೇಗನೆ ಕೆಲಸಕ್ಕೆ ಹೊರಡಬೇಕಿರುವುದರಿಂದ ಅವರಿಗೆ ಅನುಕೂಲವಾಗಲು ಹೊಸ ವೇಳಾಪಟ್ಟಿ ಮಾಡಲಾಗುತ್ತಿದೆ ಎಂದರು. ಇಂದಿರಾ ಕ್ಯಾಂಟೀನ್ ರಾಜ್ಯ ಸರಕಾರದ ಕಾರ್ಯಕ್ರಮ. ಮುಂದೆ ಯಾವುದೇ ಸರಕಾರ ಬಂದರೂ ಅದನ್ನು ಮುಂದುವರಿಸಿಕೊಂಡ ಹೋಗಬೇಕಾಗುತ್ತದೆ. ಈ ಹಿಂದಿನ ಬಿಜೆಪಿ ಸರಕಾರದ ಕಾರ್ಯಕ್ರಮಗಳನ್ನು ಈಗಿನ ಸರಕಾರ ಮುಂದುವರಿಸಿಕೊಂಡು ಬಂದಿಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನೆರವೇರಿದೆ. ರಾಹುಲ್ ಕೂಡ ಪ್ರೀತಿಯಿಂದ, ಸಕಾರಾತ್ಮಕ ದೃಷ್ಟಿಕೋನದಿಂದ ಚುನಾವಣೆ ಎದುರಿಸುವಂತೆ ಪಕ್ಷದ ಮುಖಂಡರಿಗೆ ಸಲಹೆ ನೀಡಿದ್ದಾರೆ ಎಂದು ಖಾದರ್ ತಿಳಿಸಿದರು. ರಾಹುಲ್ ಪ್ರಯಾಣದ ವೇಳೆ ಕಲ್ಲಾಪು ಬಳಿ ಜನ ಸೇರಿದ್ದರು.
ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರಿಗೆ ಪೊಲೀಸರು ಹೊಡೆದರು ಎನ್ನುವ ವದಂತಿ ಇದೆ. ಈ ಕುರಿತು ವರದಿ ತರಿಸಿ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಜನರಿಂದಲೂ ಸಣ್ಣಪುಟ್ಟ ತಪ್ಪಾಗುವ ಸಂಭವ ಇರುತ್ತದೆ. ಆದರೆ ಅದನ್ನು ಸರಿಯಾಗಿ ನಿಭಾಯಿಸುವ ಹೊಣೆಗಾರಿಕೆ ಪೊಲೀಸ್ ಇಲಾಖೆಯ ಮೇಲಿರುತ್ತದೆ ಎಂದರು.
ತಪ್ಪಾಗಿದ್ದರೆ ಕ್ಷಮೆ: ರಾಹುಲ್ ರೋಡ್ ಶೋ ಸಂದರ್ಭದಲ್ಲಿ ಕಾರ್ಯಕರ್ತರು ಉದ್ದೇಶ ಪೂರ್ವಕವಾಗಿ ಪೊಲೀಸ್ ಜೀಪ್ ಹತ್ತಿಲ್ಲ. ಸಂಭ್ರಮದಲ್ಲಿರುವಾಗ ಜನಜಂಗುಳಿ ಸೇರಿರುವಾಗ ಯಾವ ವಾಹನ ಎಂಬುದನ್ನು ಗಮನಿಸದೆ ಆಗಿರಬಹುದು. ಕಾಂಗ್ರೆಸ್ ಕಾರ್ಯಕರ್ತರಿಂದ ಇಂತಹ ಸಣ್ಣ ಪುಟ್ಟ ತಪ್ಪುಗಳಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಸಚಿವ ಖಾದರ್ ತಿಳಿಸಿದರು.
ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿದ್ದು, ಮಾ. 22ರಂದು ಸಂಜೆ 4.30ಕ್ಕೆ ಉದ್ಘಾಟನೆ ನೆರವೇರಲಿದೆ. ಅದನ್ನು ಕೂಲಿ ಕಾರ್ಮಿಕರಿಂದಲೇ ಉದ್ಘಾಟಿಸುವ ಯೋಚನೆ ಇದೆ ಎಂದು ಖಾದರ್ ತಿಳಿಸಿದರು.
Click this button or press Ctrl+G to toggle between Kannada and English