ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜನಾಶೀರ್ವಾದ ಯಾತ್ರೆಗೆ ಉಳ್ಳಾಲದಲ್ಲಿ ಮಂಗಳವಾರ ರಾತ್ರಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದರೂ, ಕಲ್ಲಾಪು, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ರಾಹುಲ್ ಗಾಂಧಿ ವಾಹನ ನಿಲ್ಲಿಸದ ಕಾರಣ ಕಾರ್ಯಕರ್ತರಿಗೆ ನಿರಾಸೆಯನ್ನುಂಟು
ಮಾಡಿದರು.
ರಾತ್ರಿ 9.30ಕ್ಕೆ ಸಮಯ ನಿಗದಿಯಾಗಿದ್ದರಿಂದ ರಾ.ಹೆ. 66ರ ಕಲ್ಲಾಪುವಿನಿಂದ ಉಳ್ಳಾಲ ಜಂಕ್ಷನ್, ದರ್ಗಾವರೆಗೆ ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕೃತ ಮಾಡಿದ್ದು, ಇದರೊಂದಿಗೆ ಹೆಜ್ಜೆಗೊಂದರಂತೆ ಜನಪ್ರತಿನಿಧಿಗಳ, ಕಾರ್ಯಕರ್ತರ ಸ್ವಾಗತ ಕೋರುವ ಬ್ಯಾನರ್ ರಾರಾಜಿಸುತ್ತಿತ್ತು.
ದರ್ಗಾದಲ್ಲೂ ವಿಶೇಷ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಬಳಿಕ ಸಚಿವ ಖಾದರ್ ಬೈಕ್‌ನಲ್ಲಿ ಉಳ್ಳಾಲವನ್ನು ತಲುಪಿದರು. ಸಾವಿರಾರು ಬೆಲೆಯ ಪಟಾಕಿ ಹಾಗೆಯೇ ಉಳಿಯಿತು. ಓವರ್ ಬ್ರಿಡ್ಜ್ ಬಳಿಯೂ ಸಾವಿರಾರು ಕಾರ್ಯಕರ್ತರು ನಾಸಿಕ್ ಬ್ಯಾಂಡ್‌ನೊಂದಿಗೆ ರಾಹುಲ್ ಸ್ವಾಗತಕ್ಕೆ ಯತ್ನಿಸಿದರೂ ವಾಹನ ನಿಲ್ಲಿಸದ ಕಾರಣ ನಿರಾಶರಾದರು.
ಉಳ್ಳಾಲ ದರ್ಗಾಕ್ಕೂ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆದರೆ ವೇದಿಕೆ ಏರದೆ ಅಲ್ಲಿಂದಲೇ ಕಾರ್ಯಕರ್ತರಿಗೆ ಹಸ್ತಲಾಘವ ಮಾಡಿ, ಉಳ್ಳಾಲ ಸರ್ಕಲ್ ಬಳಿ ಅಬ್ಬಕ್ಕನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಉಳ್ಳಾಲದಲ್ಲಿ 45 ನಿಮಿಷಗಳ ಕಾಲ ಜನಾಶೀರ್ವಾದ ಯಾತ್ರೆ ಮುಗಿಸಿ ಅನಂತರ ಮಂಗಳೂರಿಗೆ ತೆರಳಿದರು
ಕಲ್ಲಾಪುವಿನಲ್ಲಿ ಸಚಿವ ಯು.ಟಿ. ಖಾದರ್, ರಾಜ್ಯ ಅಲ್ಪಸಂಖ್ಯಾಕ ಘಟಕದ ಮುಖಂಡ ಕಣಚೂರು ಮೋನು ನೇತೃತ್ವದಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಸುಮಾರು 3 ಗಂಟೆಗಳ ಕಾಲ ಕಾರ್ಯಕರ್ತರು ಕಾದರು. ರಾತ್ರಿ ಸುಮಾರು 10. 30ರ ವೇಳೆಗೆ ಆಗಮಿಸಿದ ರಾಹುಲ್ ವಾಹನ ನಿಲ್ಲಿಸದೆ ತೆರಳಿದರು.
Click this button or press Ctrl+G to toggle between Kannada and English