ಮಂಗಳೂರು: ಸಮಾಜದಲ್ಲಿ ಪತ್ರಕರ್ತರು ತುರ್ತು ಸಂದರ್ಭಗಳಲ್ಲಿ ಸೈನಿಕರಂತೆ, ಕೆಲವೊಮ್ಮೆ ಅವರಿಗೂ ಮುಂಚಿತವಾಗಿ ಸ್ಥಳಕ್ಕೆ ತಲುಪಿ ಕಾರ್ಯ ನಿರ್ವಹಿಸಿರುವುದನ್ನು ಗಮನಿಸಿರುವುದಾಗಿ ಎಂದು ಹಿರಿಯ ಪತ್ರಕರ್ತೆ ಅನಿತಾ ಪಿಂಟೋ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ) (ಪದ್ಯಾಣ ಗೋಪಾಲಕೃಷ್ಣ ) ಹೆಸರಿನಲ್ಲಿ ನೀಡಲಾಗುತ್ತಿರುವ 2018ರ ಪ.ಗೋ ಪ್ರಶಸ್ತಿಯನ್ನು ಪ್ರಶಾಂತ್ ಸುವರ್ಣ ಅವರಿಗೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ವಿತರಿಸಿ ಅವರು ಮಾತನಾಡುತ್ತಿದ್ದರು.
ದೇಶದ ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ, ದಕ್ಷಿಣ ಭಾರತದಲ್ಲಿ ಸಂಭವಿಸಿದ ಸುನಾಮಿಯ ಸಂದರ್ಭದಲ್ಲಿ ಗುಜರಾತ್, ನಾಗಪಟ್ಟಣಂ ಪ್ರದೇಶ ಗಳಿಗೆ ನಾನು ಭೇಟಿ ನೀಡಿದಾಗ ತುರ್ತು ಕಾರ್ಯಾಚರಣೆ ನಡೆಸಲು ಸರಕಾರಿ ಯಂತ್ರಗಳು ಆಗಮಿಸುವ ಮೊದಲೆ ಯಾವೂದೇ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಸೈನಿಕರು ಪ್ರವೇಶ ಮಾಡದೆ ಇರುವ ಪ್ರದೇಶಕ್ಕೆ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಹೋಗಿ ವರದಿ ಮಾಡಿದ್ದಾರೆ. ಈ ರೀತಿಯ ಪತ್ರಕರ್ತರ ಧೈರ್ಯ , ಸ್ಥಿತ ಪ್ರಜ್ಞತೆಯಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಗಬಹುದು ಈ ನಿಟ್ಟಿ ನಲ್ಲಿ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಪತ್ರಕರ್ತೆ ಅನಿತಾ ಪಿಂಟೋ ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ವಹಿಸಿದ್ದರು. ಪ್ರೆಸ್ ಕ್ಲಬ್‌ನ ಅಧ್ಯಕ್ಷ ರೊನಾಲ್ಡ್ ಅನಿಲ್ ಫೆರ್ನಾಂಡೀಸ್, ಪ.ಗೋ.ಪ್ರಶಸ್ತಿ ಪಡೆದ ಪ್ರಶಾಂತ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಪದ್ಯಾಣ ಗೋಪಾಲ ಕೃಷ್ಣ ರವರ ಒಡನಾಟದ ಬಗ್ಗೆ ತಿಳಿಸಿದರು. ಸಂಘದ ಪೂರ್ವ ಅಧ್ಯಕ್ಷ ಪಿ.ಬಿ .ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕಾ ಭವನ ಟ್ರಸ್ಟ್‌ನ ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಸ್ವಾಗತಿಸಿ, ಪ್ರೆಸ್ ಕ್ಲಬ್‌ನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ಸ್ಮರಣೆಕೆ ವಿತರಿಸಿದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
Click this button or press Ctrl+G to toggle between Kannada and English