ತುಮಕೂರು: ಬಿಜೆಪಿ ಚಾಣಾಕ್ಷ ಅಮಿತ್ ಶಾ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಇದೇ ಮೊದಲ ಬಾರಿ ಅಮಿತ್ ಶಾ ಮಠಕ್ಕೆ ಭೇಟಿ ಕೊಟ್ಟಿದ್ದು ಶ್ರೀಗಳ ದರ್ಶನದಿಂದ ಹರ್ಷಗೊಂಡಿದ್ದಾರೆ. ಬೆಳಗ್ಗೆ 10.55 ರಿಂದ 11.5 ರವರೆಗೆ ಸುಮಾರು 10 ನಿಮಿಷಗಳ ಕಾಲ ಶಿವಕುಮಾರ ಶ್ರೀಗಳೊಂದಿಗೆ ಅಮಿತ್ ಶಾ ಕುಶಲೋಪರಿ ನಡೆಸಿದರು.
ಶ್ರೀಗಳ ಕಚೇರಿ ಪ್ರವೇಶಿಸುತಿದ್ದಂತೆ ಅಮಿತ್ ಶಾ, ಶಿವಕುಮಾರ ಸ್ವಾಮಿಗಳ ಪಾದಕ್ಕೆ ಎರಗಿ ನಮಸ್ಕರಿಸಿದ್ರು. ಅಲ್ಲದೆ ಏಪ್ರಿಲ್ 1 ರಂದು ಶ್ರೀಗಳ 111 ನೇ ಹುಟ್ಟುಹಬ್ಬ ನಡೆಯಲಿದ್ದು ಹುಟ್ಟುಹಬ್ಬದ ಶುಭಾಶಯ ಕೋರಿದ್ರು. ಆದಾದ ಬಳಿಕ ಕರ್ನಾಟಕದ ವಿಧಾನ ಸಭಾ ಚುನಾವಣೆ ಕುರಿತು ಶ್ರೀಗಳ ಜೊತೆ ಪ್ರಸ್ತಾಪಿಸಿದ್ರು. ಶ್ರೀಗಳೂ ಕೂಡಾ ನಗುನಗುತ್ತಲೇ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು.
ಬಳಿಕ ಮಠದ ವತಿಯಿಂದ ಅಮಿತ್ ಶಾ ಅವರಿಗೆ ಕೊಟ್ಟ ಒಂದು ಲೋಟ ಎಳನೀರು ಕುಡಿದು, ಡ್ರೈ ಫ್ರುಟ್ಸ್ ತಿರಸ್ಕರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಆಶೀರ್ವಾದ ನಮಗೆ ಪ್ರಾಪ್ತವಾಗಿದೆ. ಮೊದಲ ಬಾರಿಗೆ ಭೇಟಿಯಾಗುವ ಸೌಭಾಗ್ಯ ದೊರೆತಿದೆ ಎಂದು ಖುಷಿ ಹಂಚಿಕೊಂಡರು.
ಅಲ್ಲದೆ ಕರ್ನಾಟಕದಲ್ಲಿ ಯಡಿಯೂರಪ್ಪರ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ. ಶ್ರೀಗಳ ಆಶೀರ್ವಾದ ನಮಗೆ ಇನ್ನು ಹೆಚ್ಚಿನ ಶಕ್ತಿ ಕೊಟ್ಟಿದೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಂಸದ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜ್ಯೋತಿಗಣೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.
Click this button or press Ctrl+G to toggle between Kannada and English