ಕರಾವಳಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ.. ನಿವಾಸಿಗಳ ಆಕ್ರೋಶ

12:04 PM, Wednesday, March 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

water-problemಮಂಗಳೂರು: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಅಚಾರಿ ಜೋರ, ದೊಡ್ಡಳಿಕೆ ಹಾಗೂ ಎಮರಾಳು ಬಡಾವಣೆಯ ನಾಗರಿಕರು ಖಾಲಿ ಕೊಡ ಹಿಡಿದು ಕುಕ್ಕೆಪದವು ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಸಿದರು.

ಧರಣಿ ನಿರತರು ಮಾತನಾಡಿ, ಈ ಹಿಂದೆ ಕುಡಿಯವ ನೀರಿಗಾಗಿ ಪ್ರತಿಭಟನೆ ನಡೆಸಿದ್ದರಿಂದ ನಮ್ಮ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿತ್ತು. ಆದರೆ ಈಗ ಎಂಟು ದಿನಗಳಿಂದ ಟ್ಯಾಂಕರ್ ನೀರು ಇಲ್ಲ. ನೀರಿಗಾಗಿ ಹಾಹಾಕಾರ ಎದ್ದಿದ್ದು, ಮತ್ತೆ ಅತಂತ್ರ ಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು. ಇತ್ತೀಚೆಗೆ ಅಚಾರಿ ಜೋರ ಪ್ರದೇಶದಲ್ಲಿ ಎರಡು ಕೊಳವೆ ಬಾವಿಗಳನ್ನು ಕೊರೆದಿದ್ದು, ಅಂತರ್ಜಲ ಮಟ್ಟ ಕುಸಿದಿದ್ದರಿಂದ ಸಕಾಲಕ್ಕೆ ನೀರು ಲಭ್ಯವಾಗುತ್ತಿಲ್ಲ. ಇನ್ನೊಂದು ಕಡೆ ನೀರಿನ ಟ್ಯಾಂಕರ್ ಹೋಗಲಾಗದೆ ನೀರು ಸಮರ್ಪಕವಾಗಿ ಗ್ರಾಮಸ್ಥರಿಗೆ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಿಂದ ಎಚ್ಚೆತ್ತ ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ತಾ.ಪಂ ಸದಸ್ಯರು, ಪಿಡಿಒ ಅಧಿಕಾರಿಯೊಂದಿಗೆ ಅಚಾರಿ ಜೋರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಮುಂದಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಿವಾಸಿಗಳು ತಾತ್ಕಾಲಿಕ ಪರಿಹಾರ ನಮಗೆ ಬೇಡ, ಹೊಸದಾಗಿ ಕೊರೆದಿರುವ ಬಾವಿಗೆ ಪೈಪ್ ಅಳವಡಿಸಬೇಕು ಹಾಗೂ ಹಳೆ ಬಾವಿಯಲ್ಲಿರುವ ಹೂಳು ತೆಗೆಯಬೇಕೆಂದು ಆಗ್ರಹಿಸಿದರು. ಇಲ್ಲವಾದರೆ ಧರಣಿ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಜನರಿಗೆ ಸರ್ಕಾರ ನೀರು ನೀಡುವಲ್ಲಿ ವಿಫಲವಾಗಿದೆ. ನಾನು ಆಡಳಿತದಲ್ಲಿದ್ದಾಗ 16 ಕೋಟಿ ರೂ.ವೆಚ್ಚದಲ್ಲಿ ಬಹು ಗ್ರಾಮ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೆ. ಆದರೆ ಆ ಯೋಜನೆಯನ್ನು ಈಗಿನ ಸರ್ಕಾರ ಜಾರಿ ಮಾಡಲಿಲ್ಲ ಎಂದು ದೂರಿದರು. ಇದೇ ಸಂದರ್ಭ ಗ್ರಾಮಸ್ಥರಿಗೆ ಕೊಳವೆಬಾವಿಯ ಹೂಳು ತೆಗೆಯಲು ಸ್ವತಃ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಪಾಲೆಮಾರ್ ಅವರ ಮನವಿಗೆ ಮಣಿದು ನಿವಾಸಿಗಳು ಪ್ರತಿಭಟನೆ ಹಿಂಪಡೆದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English