ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆ ಅರ್ಧದಲ್ಲಿಯೇ ಮೊಟಕುಗೊಂಡಿತು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಧ್ಯಕ್ಷತೆಯಲ್ಲಿ ಸಭೆ ಸೇರಿತ್ತು. ಜಿಪಂ ಸಿಇಒ ಡಾ. ಎಂ.ಆರ್.ರವಿ ಅವರ ಗೈರಿನಲ್ಲಿ ಪ್ರಭಾರ ಉಪ ಕಾರ್ಯದರ್ಶಿ ಎಂ.ವಿ.ನಾಯಕ್ ಹಾಜರಾಗಿದ್ದರು. ಉಪಾಧ್ಯಕ್ಷೆ ಕಸ್ತೂರಿ ಪಂಜ ಉಪಸ್ಥಿತರಿದ್ದರು.
ಅಷ್ಟರಲ್ಲೇ ರಾಜ್ಯದ ಚುನಾವಣಾ ದಿನಾಂಕ ಘೋಷಣೆಯಾಗಿತ್ತು. ಆದರೆ ಸಭೆಯ ಮೂಡ್‌ನಲ್ಲಿ ಮುಳುಗಿದ್ದ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಈ ವಿಚಾರ ಗೊತ್ತಿರಲಿಲ್ಲ. ಗೊತ್ತಿದ್ದವರಿಗೆ ನೀತಿ ಸಂಹಿತೆ ಜಾರಿಗೊಂಡ ಬಗ್ಗೆ ತಿಳಿವಳಿಕೆ ಇರಲಿಲ್ಲ. ಮಾಧ್ಯಮದವರು ಗಮನಕ್ಕೆ ತಂದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ನೀತಿ ಸಂಹಿತೆಯ ನೆರಳಿನಲ್ಲೇ ಸಾಮಾನ್ಯ ಸಭೆ ಮಧ್ಯಾಹ್ನ 12.50ರವರೆಗೆ ಮುಂದುವರಿಯಿತು.
ಈ ಮಧ್ಯೆ 12 ಗಂಟೆಯ ಸುಮಾರಿಗೆ ಉಪ ಕಾರ್ಯದರ್ಶಿ ಎಂ.ವಿ.ನಾಯಕ್, ನೀತಿ ಸಂಹಿತೆ ಜಾರಿಗೊಂಡಿರುವುದರಿಂದ ಸಭೆ ನಡೆಸುವಂತಿಲ್ಲ. ಸಭೆ ನಡೆಸಿದರೂ ಅಭಿವೃದ್ಧಿ ಪರವಾಗಿ ಚರ್ಚೆ ನಡೆಸುವಂತಿಲ್ಲ. ಚರ್ಚೆ ನಡೆಸಿದರೂ ನಿರ್ಣಯ ಕೈಗೊಳ್ಳುವಂತಿಲ್ಲ ಎಂದು ಹೇಳಿದರು. ಆದರೆ ಇದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಸದಸ್ಯರೂ ಇರಲಿಲ್ಲ. ಒಂದಿಬ್ಬರು ಸದಸ್ಯರು, ಹಾಗಾದರೆ ಸಭೆಯನ್ನು ಮುಂದೂಡುವಂತೆ ಸಲಹೆ ಮಾಡಿದರೂ ಸಭಾಧ್ಯಕ್ಷರು ಸಭೆಯ ಮೂಡ್‌ನಲ್ಲೇ ಇದ್ದರು.
Click this button or press Ctrl+G to toggle between Kannada and English