ಕುಟುಂಬದವರಿಗೆ ಟಿಕೆಟ್‌ ಕೊಟ್ರೆ ಜನಾರ್ದನ ರೆಡ್ಡಿ ರಾಜಕೀಯ ಎಂಟ್ರಿ!?

6:22 PM, Wednesday, March 28th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

janardhan-reddyಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದಿದ್ದ ಬಳ್ಳಾರಿ ಗಣಿ-ಧಣಿ ಗಾಲಿ ಜನಾರ್ದನ ರೆಡ್ಡಿ ಮತ್ತೆ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗ್ತಿದೆ.

ತಮ್ಮನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ನಾಲ್ಕೈದು ಜಿಲ್ಲೆಗಳಲ್ಲಿ ತಾವು ಬಿಜೆಪಿ ಪರ ಸಕ್ರಿಯವಾಗಿ ಕೆಲಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಜನಾರ್ಧನರೆಡ್ಡಿ ವರಿಷ್ಠರಿಗೆ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ತಮ್ಮ ಆಪ್ತರ ಬಳಿ ಪಕ್ಷ ಸೇರ್ಪಡೆ ಕುರಿತಂತೆ ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಿರುವ ಜನಾರ್ದನ ರೆಡ್ಡಿ , ಆದಷ್ಟು ಬೇಗ ವರಿಷ್ಠರು ಯಾವುದಾದರೊಂದು ತೀರ್ಮಾನ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಈವರೆಗೂ ರಾಜ್ಯ ನಾಯಕರನ್ನಾಗಲಿ ಅಥವಾ ರಾಷ್ಟ್ರೀಯ ನಾಯಕರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದಿರುವ ರೆಡ್ಡಿ, ತಮ್ಮ ಒಡನಾಡಿಗಳ ಮೂಲಕ ಪಕ್ಷ ಸೇರ್ಪಡೆ ಬಗ್ಗೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ 2011ರ ಸೆ.5ರಂದು ಸಿಬಿಐ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿದ್ದರಿಂದ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಈಗ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಕರೆತಂದರೆ, ಪಕ್ಷಕ್ಕೆ ಆಗಬಹುದಾದ ಲಾಭ-ನಷ್ಟಗಳ ಬಗ್ಗೆಯೂ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಲಾಗ್ತಿದೆ.

ನಾನು ಬಿಜೆಪಿಗೆ ಬಂದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಅಭ್ಯರ್ಥಿಗಳ ಗೆಲುವಿಗೆ ಎಲ್ಲಾ ರೀತಿಯ ಕಾರ್ಯತಂತ್ರವನ್ನು ರೂಪಿಸಲಿದ್ದೇನೆ. ನನ್ನ ಸಹೋದರರಾದ ಕರುಣಾಕರರೆಡ್ಡಿಗೆ ಹರಪನಹಳ್ಳಿಯಿಂದ, ಸೋಮಶೇಖರ ರೆಡ್ಡಿಗೆ ಬಳ್ಳಾರಿಯಿಂದ, ಸಂಸದ ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣ, ಪತ್ನಿ ಅರುಣಾರೆಡ್ಡಿಗೆ ಕೋಲಾರದಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ನನ್ನ ತವರು ಜಿಲ್ಲೆ ಬಳ್ಳಾರಿಗೆ ಹೋಗುವಂತಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ರಾಜ್ಯದ ಎಲ್ಲಾ ಕಡೆಯೂ ಪ್ರವಾಸ ಮಾಡಲು ಯಾವುದೇ ಕಾನೂನಿನ ತೊಡಕಿಲ್ಲ. ನನ್ನಂತೆಯೇ ಗುರುತರ ಆರೋಪಕ್ಕೆ ಸಿಲುಕಿರುವ ಶಾಸಕರಾದ ಆನಂದ್‍ಸಿಂಗ್, ಬಿ.ನಾಗೇಂದ್ರ, ನೈಸ್ ಕಂಪನಿ ಮುಖ್ಯಸ್ಥ ಅಶೋಕ್ ಖೇಣಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವಾಗ ನಾನು ಬಿಜೆಪಿಗೆ ಏಕೆ ಸೇರ್ಪಡೆಯಾಗಬಾರದು ಎಂಬ ಪ್ರಶ್ನೆಯನ್ನು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ ಎನ್ನಲಾಗ್ತಿದೆ.

ಜನಾರ್ದನ ರೆಡ್ಡಿ ಅವರ ಈ ಮನವಿಯನ್ನು ಹೈಕಮಾಂಡ್ ತಿರಸ್ಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕಳಂಕಿತರನ್ನು ಸೇರಿಸಿಕೊಂಡ ಆರೋಪಕ್ಕೆ ನಾವು ತುತ್ತಾಗುತ್ತೇವೆ. ಸೇರ್ಪಡೆ ಮಾಡಿಕೊಳ್ಳದಿದ್ದರೆ ಅದೇ ರೆಡ್ಡಿ ಅನ್ಯಪಕ್ಷಗಳ ಜತೆ ಒಳ ಒಪ್ಪಂದ ಮಾಡಿಕೊಂಡರೆ ಪಕ್ಷಕ್ಕೆ ನಷ್ಟ ಉಂಟಾಗಬಹುದೆಂಬ ಜಿಜ್ಞಾಸೆ ವರಿಷ್ಠರನ್ನು ಕಾಡುತ್ತಿದೆ.

ಆನಂದ್‍ಸಿಂಗ್ ಹಾಗೂ ಬಿ.ನಾಗೇಂದ್ರ ಅವರನ್ನೇ ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಿದೆ. ನಾನೂ ಕೂಡ ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲಲ್ಲೇ ನಿಂತಿದ್ದೇನೆ. ವರಿಷ್ಠರು ಈವರೆಗೂ ಯಾವುದೇ ತೀರ್ಮಾನ ಕೈಗೊಳ್ಳದಿರುವುದು ಅತ್ಯಂತ ನೋವು ಉಂಟು ಮಾಡಿದೆ ಎಂದು ಜನಾರ್ದನ ರೆಡ್ಡಿ ತಮ್ಮ ಆಪ್ತರ ಬಳಿ ಅಸಮಧಾನ ಹೊರಹಾಕಿದ್ದಾರೆ ಎಂದು ತಿಳಿದುಬಂದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English