ಮಂಗಳೂರು: ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ. ಮುರಳಿ ಮೋಹನ ಚೂಂತಾರು ಅವರು ಮೇಲಾಧಿಕಾರಿಯವರ ಅನುಮತಿ ಇಲ್ಲದೆ ಅನ್ಯ ರಾಜ್ಯದಲ್ಲಿ ದಂತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪ ಸಾಬೀತಾಗಿದ್ದು, ಮುಂದಿನ ಕ್ರಮ ಕೈಗೊಳ್ಳಬಹುದು ಎಂದು ಪಶ್ಚಿಮ ವಲಯ ಐಜಿಪಿಯವರು ಗೃಹರಕ್ಷಕ ದಳದ ಮಹಾ ಸಮಾದೇಷ್ಟರಿಗೆ (ಬೆಂಗಳೂರು) ಶಿಫಾರಸು ಮಾಡಿದ್ದಾರೆ.
ಡಾ. ಚೂಂತಾರು ತನ್ನ ಸಾಮಾಜಿಕ ವೃತ್ತಿಗೆ ನ್ಯಾಯ ಹಾಗೂ ಗೌರವ ಕೊಡದೆ ವೈಯಕ್ತಿಕ ವೃತ್ತಿಗೆ ಹೆಚ್ಚಿನ ಗಮನ ಕೊಟ್ಟು ಪದೇ ಪದೆ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಟ್ಟು ಕೇರಳ ರಾಜ್ಯಕ್ಕೆ ತೆರಳುತ್ತಿರುವುದು ಕಂಡುಬರುತ್ತದೆ ಎಂದು ಐಜಿಪಿಯವರು ವರದಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ಕೋಮು ಸೂಕ್ಷ್ಮ ಪ್ರದೇಶಗಳನ್ನು ಹೊಂದಿದ್ದು, ಇಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿ ಎದುರಾದಾಗ ತುರ್ತಾಗಿ ಸ್ಪಂದಿಸಿ, ಅಗತ್ಯ ಸಿಬ್ಬಂದಿ ನಿಯೋಜಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ಗುರುತರ ಜವಾಬ್ದಾರಿ ಇಲಾಖೆ ಮೇಲಿದೆ ಎಂದು ವರದಿಯಲ್ಲಿ ನಮೂದಿಸಲಾಗಿದೆ.
ಗೌರವಾನ್ವಿತ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ ವ್ಯವಹಾರಿಕ ವೃತ್ತಿಗೆ ಆದ್ಯತೆ ನೀಡುತ್ತಿರುವುದು ಕಂಡುಬರುತ್ತಿದೆ. ಮುಂಬರುವ ಚುನಾವಣಾ ಕರ್ತವ್ಯಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಸಂದರ್ಭ ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಟ್ಟು ತೆರಳುವ ಡಾ. ಚೂಂತಾರು ಅವರ ಪ್ರವೃತ್ತಿಯಿಂದ ಇಲಾಖೆ ಕರ್ತವ್ಯಕ್ಕೆ ತೀವ್ರ ತೊಂದರೆಯಾಗುತ್ತಿದೆ. ಅವರು ಕಮಾಂಡೆಂಟ್ ಹುದ್ದೆಯನ್ನು ನಿರ್ವಹಿಸಲು ವಿಫಲರಾಗಿರುತ್ತಾರೆ ಎಂದು ಐಜಿಪಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಾ. ಚೂಂತಾರು ಅವರು ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೆ ಕೇರಳ ರಾಜ್ಯದ ಮಂಜೇಶ್ವರ ಹೊಸಂಗಡಿ ಎಂಬಲ್ಲಿ `ಸುರಕ್ಷಾ’ ಹೆಸರಿನ ದಂತ ಚಿಕಿತ್ಸಾಲಯದಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ (ಗೃಹ ರಕ್ಷಕ ದಳದ ಕಮಾಂಡೆಂಟ್ ಹೊರ ರಾಜ್ಯಗಳಿಗೆ ತೆರಳುವ ಸಂದರ್ಭ ಡಿಐಜಿಯವರ ಪೂರ್ವಾನುಮತಿ ಪಡೆಯಬೇಕು). ಅಲ್ಲದೆ ಇವರು ಕೇರಳ ರಾಜ್ಯದ ನೋಂದಣಿ ಇರುವ ಕಾರನ್ನೇ ಬಳಸುತ್ತಿದ್ದಾರೆ ಎಂದು ಆರೋಪಿಸಿ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಬರ್ನಾಡ್ ಡೇಸಾ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಐಜಿಪಿಯವರಿಗೆ ಈ ಹಿಂದೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮಂಜೇಶ್ವರ ಹೊಸಂಗಡಿಯಲ್ಲಿರುವ `ಸುರಕ್ಷಾ ಕ್ಲಿನಿಕ್’ನಲ್ಲಿ ಡಾ. ಮುರಳಿ ಮೋಹನ್ ಚುಂತಾರು ಅವರ ಪತ್ನಿ ಡಾ. ರಾಜಶ್ರೀ ಮೋಹನ್ ಪ್ರಾಕ್ಟೀಸ್ ನಡೆಸುತ್ತಿದ್ದಾರೆ. ಪ್ರತೀ ದಿನ ಸಾಯಂಕಾಲ 4 ರಿಂದ 6 ಗಂಟೆ ತನಕ ಡಾ. ಮುರಳಿ ಮೋಹನ್ ಚೂಂತಾರು ಈ ಕ್ಲಿನಿಕ್‌ಗೆ ಬರುತ್ತಾರೆಂದು ಜನರು ಹೇಳಿಕೆ ನೀಡಿರುವುದನ್ನು ಉಲ್ಲೇಖಿಸಿದ್ದಾರೆ.
ಡಾ.ಚೂಂತಾರು ಅವರ ವಿಸಿಟಿಂಗ್ ಕಾರ್ಡ್‌ನಲ್ಲಿ `ವೈದ್ಯರು, ಸುರಕ್ಷಾ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್, ರಿಫಾ ಸೆಂಟರ್, ಹೊಸಂಗಡಿ, ಮಂಜೇಶ್ವರ ಎಂದು ವಿಳಾಸ ನಮೂದಿಸಿರುವುದನ್ನು ಕೂಡ ಪೊಲೀಸರು ಗುರುತಿಸಿದ್ದಾರೆ. ಅಲ್ಲದೆ ಚೂಂತಾರು ಮೊಬೈಲ್‌ನ ಸಿಡಿಆರ್ (ಕಾಲ್ ಡಿಟೈಲ್ ರೆಕಾರ್ಡ್) ಪ್ರಕಾರ ಅವರು ಕೇರಳ ಹಾಗೂ ದೇರಳಕಟ್ಟೆಯಲ್ಲಿ ಹೆಚ್ಚು ಸಮಯ ಇರುವುದನ್ನು ಪೊಲೀಸರು ದೃಢೀಕರಿಸಿದ್ದಾರೆ.
Click this button or press Ctrl+G to toggle between Kannada and English