ಕಾರು – ಬಸ್‌ ಢಿಕ್ಕಿ: ಚಾರ್ಟರ್ಡ್‌ ಅಕೌಂಟೆಂಟ್‌ ಸಾವು

12:31 PM, Saturday, March 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

prakash-hegdeಮೂಡಬಿದಿರೆ: ಸಮೀಪದ ಹಂಡೇಲುಸುತ್ತಿನಲ್ಲಿ ಶುಕ್ರವಾರ ಬೆಳಗ್ಗೆ ಕಾರು ಮತ್ತು ಖಾಸಗಿ ಟೂರಿಸ್ಟ್‌ ಬಸ್‌ ಮುಖಾಮುಖೀ ಢಿಕ್ಕಿಯಾಗಿ ಕಾರ್ಕಳ ಮೂಲದ ಚಾರ್ಟರ್ಡ್‌ ಅಕೌಂಟೆಂಟ್‌ ಪ್ರಕಾಶ್‌ ಹೆಗ್ಡೆ (62) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕಾಶ್‌ ಹೆಗ್ಡೆ ಅವರು ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ಗುರುವಾರ ಪತ್ನಿ ಮತ್ತು ಮಕ್ಕಳನ್ನು ಮಂಗಳೂರಿಗೆ ಕರೆದೊಯ್ದಿದ್ದರು. ಶುಕ್ರವಾರ ಕಾರ್ಕಳಕ್ಕೆ ವಾಪಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕೋಲಾರದಿಂದ ಬಂದಿದ್ದ ಪ್ರವಾಸಿಗರಿದ್ದ ಬಸ್‌ ಧರ್ಮಸ್ಥಳದಿಂದ ಕಟೀಲು ಕಡೆಗೆ ಸಾಗುತ್ತಿತ್ತು. ದುರ್ಘ‌ಟನೆ ಸಂಭವಿಸಿದ ಸ್ಥಳದಲ್ಲಿ ರಸ್ತೆ ತಿರುವಿನಿಂದ ಕೂಡಿರುವುದಲ್ಲದೆ ರಸ್ತೆ ಇಲ್ಲಿ ವಿಭಜನೆಗೊಳ್ಳುವುದರಿಂದ ಅಪಘಾತ ವಲಯ ಎನಿಸಿಕೊಂಡಿದೆ.

ಮೃತ ಪ್ರಕಾಶ್‌ ಹೆಗ್ಡೆ ಅವರು ಕಾರ್ಕಳ ಬೋರ್ಡ್‌ ಹೈಸ್ಕೂಲ್‌ನಲ್ಲಿ ಹಿಂದಿ ಶಿಕ್ಷಕರಾಗಿದ್ದ ನಾರಾಯಣ ಹೆಗ್ಡೆ ಅವರ ಪುತ್ರ. ಕಾರ್ಕಳ ಭುವನೇಂದ್ರ ಕಾಲೇಜಿನ ಹಳೆ ವಿದ್ಯಾರ್ಥಿ. ಕಾರ್ಕಳ ವೆಂಕಟರಮಣ ದೇವಸ್ಥಾನದ ಬಳಿಯ ಓಲ್ಡ್‌ ಎಲೆಕ್ಟ್ರಿಕ್‌ ಲೇನ್‌ನಲ್ಲಿ ಮನೆ ಹೊಂದಿದ್ದು, ಪ್ರಕಾಶ್‌ ಹೆಗ್ಡೆ ಅಸೋಸಿಯೇಟ್ಸ್‌ ಎಂಬ ಸಿಎ ಸೇವಾ ಸಂಸ್ಥೆಯನ್ನು 1985ರಲ್ಲಿ ತೆರೆದು ತಮ್ಮ ವ್ಯವಹಾರದ ಮೂಲಕ ಕಾರ್ಕಳದ ಮುಂಚೂಣಿ ಲೆಕ್ಕಪರಿಶೋಧಕರಾಗಿ ಹೆಸರು ಗಳಿಸಿದ್ದರು. ಕಾರ್ಕಳ ರೋಟರಿ ಸದಸ್ಯರಾಗಿದ್ದ ಅವರು ಐಸಿಎಐ ಉಡುಪಿ ಶಾಖೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ, ಕಾರ್ಕಳದ ಮಕ್ಕಳ ತಜ್ಞೆ ಡಾ. ಆಶಾ ಹೆಗ್ಡೆ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹಿರಿಯಾ ಪುತ್ರಿ ಬೆಲ್ಜಿಯಂನಲ್ಲಿ ಎಂಜಿನಿಯರ್‌ ಆಗಿ ಉದ್ಯೋಗದಲ್ಲಿದ್ದಾರೆ. ಕಿರಿಯ ಪುತ್ರಿ ಎಂಜಿನಿಯರಿಂಗ್‌ ಓದುತ್ತಿದ್ದಾರೆ. ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English