ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಇಂದು ಸಂಸದ ಶ್ರೀರಾಮುಲು ವಿಶೇಷ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಜನಾರ್ದನ ರೆಡ್ಡಿ ರಾಜಕೀಯ ಮರುಪ್ರವೇಶದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲೇ ಬೇಕಿರುವ ಸಂದರ್ಭದಲ್ಲಿ ಈ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಬಿಜೆಪಿಗೂ, ಜನಾರ್ದನ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಡಿರುವ ಮಾತಿನ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ.
ಸಭೆ ಎಲ್ಲಿ, ಯಾವ ಸಮಯಕ್ಕೆ ನಡೆಯಲಿದೆ ಎನ್ನುವ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಮೊದಲು ಶ್ರೀರಾಮುಲು, ಜನಾರ್ದನ ರೆಡ್ಡಿ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಿದ್ದು, ನಂತರ ಬಿಎಸ್‍ವೈರನ್ನು ರಾಮುಲು ಭೇಟಿ ಮಾಡಲಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರ ಆಪ್ತರು ಅಮಿತ್ ಶಾ ಬಾಯಲ್ಲಿ ಈ ಮಾತನ್ನು ಆಡಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದೇ ವಿಚಾರವಾಗಿ ಜನಾರ್ದನ ರೆಡ್ಡಿ ಕೂಡ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ರಾಮುಲು ಈ ವಿಚಾರವಾಗಿ ಚರ್ಚಿಸಲು ಬಿಎಸ್‍ವೈ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇದು ಸಂಧಾನ ಸಭೆ ಆಗಿದ್ದು, ಬಿ.ಎಸ್. ಯಡಿಯೂರಪ್ಪ ರೆಡ್ಡಿ ವಿಚಾರವಾಗಿ ಸ್ಪಷ್ಟ ನಿಲುವು ವ್ಯಕ್ತಪಡಿಸದಿದ್ದರೆ ಜನಾರ್ದನ ರೆಡ್ಡಿ ಬೆಂಬಲಿಗರು ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನಾಲ್ಕೈದು ದಿನದ ಹಿಂದೆ ಅಮಿತ್ ಶಾ ಮೈಸೂರಿನಲ್ಲಿ ನೀಡಿದ್ದ ಸ್ಪಷ್ಟೀಕರಣದಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ನಡುವೆ ಸಂಬಂಧವಿಲ್ಲ ಎಂದಿದ್ದರು. ಅದಾಗಲೇ ಸಾಕಷ್ಟು ಮಂದಿ ಬಿಜೆಪಿಗೆ ಮರಳುತ್ತಿದ್ದು, ತಾವು ಕೂಡ ಬಿಜೆಪಿಯಲ್ಲಿ ಮರುಹುಟ್ಟು ಪಡೆಯಲು ಹಂಬಲಿಸಿರುವ ಜನಾರ್ದನ ರೆಡ್ಡಿಗೆ ಬಿಎಸ್‍ವೈ ಆಪ್ತರೇ ಮುಳುವಾಗಿದ್ದಾರೆ ಎನ್ನಲಾಗುತ್ತಿದೆ. ಇವರೇ ತಮ್ಮ ಪ್ರವೇಶಕ್ಕೆ ತಡೆಯಾಗಿದ್ದಾರೆ ಎಂದು ಆಪ್ತರಲ್ಲಿ ರೆಡ್ಡಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪಕ್ಷದಲ್ಲಿ ತಮಗೆ ಯಾವುದೇ ಸ್ಥಾನಮಾನ ನೀಡುವ ಅಗತ್ಯವಿಲ್ಲ. ಆದರೆ ಇಂತಹ ಮಾತನ್ನು ರಾಷ್ಟ್ರೀಯ ನಾಯಕರಿಂದ ಹೇಳಿಸಬಾರದಿತ್ತು ಎಂದು ರೆಡ್ಡಿ ಹೇಳಿದ್ದಾರೆ ಎನ್ನಲಾಗುತ್ತಿದ್ದು, ಬಿಎಸ್‍ವೈ ಹಾಗೂ ಅವರ ಬೆಂಬಲಿಗರ ಮೇಲೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ.
ಇಂದು ಬಿಎಸ್‍ವೈ ಭೇಟಿ ನಂತರ ಮತ್ತೆ ರಾಮುಲು ನೇರವಾಗಿ ಜನಾರ್ದನ ರೆಡ್ಡಿ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಒಂದೊಮ್ಮೆ ಮಾತುಕತೆ ಸಫಲವಾದರೆ ರೆಡ್ಡಿ ಆಪ್ತರು ಕೆಲವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ. ವಿಫಲವಾದರೆ ಅವರೆಲ್ಲಾ ಪಕ್ಷೇತರರಾಗಿ ಕಣಕ್ಕಿಳಿಯುವುದು ಖಚಿತವಾಗಿದೆ.
Click this button or press Ctrl+G to toggle between Kannada and English