ಮಂಗಳೂರು: ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಎ. 6ರಿಂದ ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಮನೆ-ಮನ ಕಮಲ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ ತಿಳಿಸಿದ್ದಾರೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸ್ಥಾಪನಾ ದಿನವಾದ ಎ.6ರಂದು ಅಭಿಯಾನ ಆರಂಭಗೊಳ್ಳಲಿದೆ ಎಂದರು. ಅಭಿಯಾನದಲ್ಲಿ ಮನೆ ಮನೆಗೆ ಭೇಟಿ ನೀಡಿ, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಸಾಧನೆ ಮತ್ತು ರಾಜ್ಯದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಜನತೆಗೆ ಮನದಟ್ಟು ಮಾಡಲಾಗುವುದು ಎಂದವರು ತಿಳಿಸಿದರು.
ಮನೆ -ಮನ ಕಮಲ ಅಭಿಯಾನಕ್ಕಾಗಿ ಈಗಾಗಲೇ ಜಿಲ್ಲೆಯ 8 ಮಂಡಲ ಮತ್ತು 52 ಮಹಾಶಕ್ತಿ ಕೇಂದ್ರಗಳಲ್ಲಿ ಮಹಿಳಾ ಕಾರ್ಯಕರ್ತರು ಪೂರ್ವ ತಯಾರಿ ನಡೆಸಿದ್ದಾರೆ. ಪ್ರತಿ ಬೂತ್‌ನಲ್ಲಿ 10 ಮಂದಿ ಮಹಿಳಾ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಕೇಂದ್ರ ಸರಕಾರ ಮಹಿಳೆಯರಿಗಾಗಿ ರೂಪಿಸಿದ ‘ಬೇಟಿ ಬಚಾವೊ-ಬೇಟಿ ಪಢಾವೊ’, ಸುಕನ್ಯಾ ಸಮೃದ್ದಿ ಯೋಜನೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಉಜ್ವಲಾ ಯೋಜನೆ, ಸುರಕ್ಷಿತ ಮಾತೃತ್ವ ಯೋಜನೆ, ಮಹಿಳಾ ಉದ್ಯಮಿಗಳಿಗೆ ಮುದ್ರಾ ಸಾಲ ಮುಂತಾದ ವಿಷಯಗಳನ್ನು ಮತದಾರಿಗೆ ಮನದಟ್ಟು ಮಾಡಲಾಗುವುದು. ಬಿಜೆಪಿಗೆ ಮತ ನೀಡುವಂತೆ ಮನೆ ಮನ ಕಮಲ ಅಭಿಯಾನದಲ್ಲಿ ಕಾರ್ಯಕರ್ತೆಯರು ವಿನಂತಿಸಲಿದ್ದಾರೆ ಎಂದು ಪೂಜಾ ಪೈ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಮಾಲಿನಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ರಾಜೀವಿ ಕೆಂಪುಮಣ್ಣು, ಸಂಧ್ಯಾ ವೆಂಕಟೇಶ್, ಉತ್ತರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಬಬಿತಾ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English