ಮತದಾನ ಜಾಗೃತಿ ಹಾಡಿನ ಬಗ್ಗೆ ಗೊಂದಲ: ವಿವಾದಕ್ಕೆ ತೆರೆ ಎಳೆದ ಪಟ್ಲ ಸತೀಶ್ ಶೆಟ್ಟಿ

12:52 PM, Thursday, April 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sathish-patlaಮಂಗಳೂರು: ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಹಾಡನ್ನು ನಿರ್ಮಿಸಲಾಗಿದ್ದು, ಈ ಹಾಡು ಗೊಂದಲ ಸೃಷ್ಟಿಸಿತ್ತು.

ಈ ಬಗ್ಗೆ ಇದ್ದ ಗೊಂದಲಕ್ಕೆ ಹಾಡಿನ ಗಾಯಕ, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ಹಾಡಿನ ಸಾಹಿತ್ಯದ ಕುರಿತು ಎದ್ದಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಪಂ ಸ್ವೀಪ್ ಸಮಿತಿಯು ಯಕ್ಷಗಾನ ಶೈಲಿ ಹಾಡುಗಾರಿಕೆಯ ಧ್ವನಿ ಮುದ್ರಿಕೆಯನ್ನು ಹೊರ ತಂದಿತ್ತು. ಪ್ರಜಾಪ್ರಭುತ್ವ ಹಬ್ಬ ಎಂಬ ಶೀರ್ಷಿಕೆಯಲ್ಲಿ ಯಕ್ಷಗಾನ ಶೈಲಿಯ ಗೀತೆಯನ್ನು ಪಟ್ಲ ಸತೀಶ್ ಶೆಟ್ಟಿ ಅವರು ಹಾಡಿದ್ದರು. ಜೊತೆಗೆ ಇದಕ್ಕೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು.

ಇನ್ನು ಹಾಡಿನ ಸಾಹಿತ್ಯದ ಬಗ್ಗೆ ವ್ಯಾಪಕ ಗೊಂದಲ ಏರ್ಪಟ್ಟಿತ್ತು. ಗೀತೆಯ ಸಾಹಿತ್ಯವನ್ನು ಜಿಲ್ಲಾ ಪಂಚಾಂಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಮ್.ಆರ್.ರವಿ ರಚಿಸಿರುವುದಾಗಿ ಪ್ರಕಟಣೆಯೊಂದು ಬಂದಿತ್ತು. ಆದರೆ ಈ ಹಾಡನ್ನು ರಚಿಸಿದವರು ಕದ್ರಿ ನವನೀತ್ ಶೆಟ್ಟಿಯವರು ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು.

ಪದ್ಯದ ಆರಂಭದಲ್ಲಿರುವ ಹಬ್ಬ ಬಂತು ಹಬ್ಬ, ಪ್ರಜಾಪ್ರಭುತ್ವ ಹಬ್ಬ, 5 ವರ್ಷಕ್ಕೊಮ್ಮೆ ಸೇರಿ ಸಂಭ್ರಮಿಸುವ ಹಬ್ಬ ಎನ್ನುವ ಈ ಎರಡು ಸಾಲುಗಳನ್ನು ಜಿಪಂ ಸಿಇಒ ಬರೆದಿದ್ದರು. ಇನ್ನುಳಿದ ಎಲ್ಲಾ ಸಾಲುಗಳು ಕದ್ರಿ ನವನೀತ್ ಶೆಟ್ಟಿಯವರದ್ದು ಎನ್ನುವ ಮಾತುಗಳು ಕೇಳಿಬಂದಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟವಾಗಿತ್ತು.

ಈ ವಿವಾದಗಳ ಹಿನ್ನೆಲೆಯಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಸ್ಪಷ್ಟನೆ ನೀಡಿದ್ದಾರೆ. ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎಂ.ಆರ್. ರವಿ ಅವರ ಕೋರಿಕೆಯ ಮೇರೆಗೆ ಪ್ರಜಾಪ್ರಭುತ್ವ ಹಬ್ಬ ಹಾಡಿಗೆ ಸ್ವರ ಸಂಯೋಜಿಸಿ ಗಾಯನ ಮಾಡಿದ್ದೇನೆ. ಇದರ ಮೂಲ ಸಾಹಿತ್ಯವನ್ನು ಡಾ.ಎಂ.ಆರ್. ರವಿಯವರು ರಚಿಸಿ ನನಗೆ ಕಳುಹಿಸಿ ಕೊಟ್ಟಿದ್ದು, ಅದರ ಪಲ್ಲವಿಯನ್ನು ಬಳಸಿಕೊಂಡಿರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೋರ್ವ ಬರಹಗಾರರಾದ ಕದ್ರಿ ನವನೀತ್ ಶೆಟ್ಟಿಯವರು ನೀಡಿದ ಉಳಿದ ಸಾಹಿತ್ಯವನ್ನು ಬಳಸಿಕೊಂಡು ಹಾಡುಗಾರಿಕೆಯನ್ನು ಸಂಪೂರ್ಣಗೊಳಿಸಿರುತ್ತೇನೆ. ಹಾಡು ಇಬ್ಬರ ಸಾಹಿತ್ಯವನ್ನು ಒಳಗೊಂಡಿದ್ದು, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿಯನ್ನು ಉಂಟುಮಾಡುವ ಸದುದ್ದೇಶದಿಂದ ಕೂಡಿರುತ್ತದೆ. ಸಂವಹನ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಹಾಡಿನ ಸಾಹಿತ್ಯದ ಬಗ್ಗೆ ಅನಗತ್ಯ ವಿವಾದ ಉಂಟಾಗಿದೆ. ಅದನ್ನು ಇಲ್ಲಿಗೇ ಕೊನೆಗಾಣಿಸಬೇಕೆಂದು ಕೋರುತ್ತೇನೆ ಎಂದು ಸತೀಶ್ ಶೆಟ್ಟಿಯವರು ತಿಳಿಸಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English