ಉಡುಪಿ: ಆತ ದಟ್ಟ ಕಾಡಿನ ಮಧ್ಯದ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದ. ತಂದೆ ವೃತ್ತಿಯಲ್ಲಿ ಚಾಲಕ. ತಾಯಿ ಮನೆಯೊಡತಿ. ಕಡು ಬಡತನವನ್ನು ಮೆಟ್ಟಿನಿಂತ ಆತ ಇಂದು ದೇಶಕ್ಕೆ ಕಾಮನ್‌ವೇಲ್ತ್ ವೇಯ್ಟ್ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ವಂಡ್ಸೆ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ಧು ಪೂಜಾರಿಯವರ ಮಗ ಗುರುರಾಜ್. 56 ಕೆ.ಜಿ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಗಗನದೆತ್ತರಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ನಮ್ಮ ಕನ್ನಡದ ಕುಡಿ.
ಬಾಲ್ಯದಿಂದಲೇ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಗುರುರಾಜ್ ಛಲ ಬಿಡದ ಪರಿಶ್ರಮದಿಂದಾಗಿ ಈ ಗುರಿಯನ್ನು ತಲುಪಿದ್ದಾರೆ. ಮಹಾಬಲ ಪೂಜಾರಿ ಹಾಗು ಪದ್ಧು ದಂಪತಿಯ 6 ಮಕ್ಕಳಲ್ಲಿ 5ನೇ ಪುತ್ರ ಗುರುರಾಜ್.
ಓದಿನಷ್ಟೆ ಕ್ರೀಡೆಯಲ್ಲಿಯೂ ಗುರುರಾಜ್ ಆಸಕ್ತಿ ತೋರುತ್ತಿದ್ದರು. ಗುರುರಾಜ್ ಅವರ ತಂದೆ ಮಹಾಬಲ ಚಾಲಕ ವೃತ್ತಿ ಮಾಡಿಕೊಂಡು ಕಷ್ಟದಾಯಕವಾಗಿ ಕುಟುಂಬವನ್ನು ನಡೆಸುತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ನಡುವೆಯೂ ಮಗನ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇಂದು ಮಗನ ಸಾಧನೆ ಕುರಿತು ತಂದೆ ಮಹಾಬಲ ಸಂತಸ ವ್ಯಕ್ತಪಡಿಸಿದ್ದಾರೆ.
ಮಗನ ಪ್ರತಿಭೆಯನ್ನು ಗುರುತಿಸಿದ ಪೋಷಕರು ಹಾಗೂ ಗುರುಗಳು ಗುರುರಾಜ್‌ಗೆ ಸದಾ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇವರೆಲ್ಲರ ಪ್ರೋತ್ಸಾಹದ ಫಲವೇ ಇಂದು ಗುರುರಾಜ್ ಕ್ರೀಡಾಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ದೊಡ್ಡ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.
Click this button or press Ctrl+G to toggle between Kannada and English