ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ಫೋಟಕ ಮಾಹಿತಿಯನ್ನು ಇಂದು ಹೊರಹಾಕುವುದಾಗಿ ರಾಜ್ಯ ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ.
ಇದಕ್ಕೆ ಇಂದು ಮಧ್ಯಾಹ್ನ 1.30ಕ್ಕೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಆಪ್ತ ಸಚಿವರು ಸುದ್ದಿಗೋಷ್ಠಿ ಕರೆದಿದ್ದು, ಮಹತ್ವದ ಮಾಹಿತಿ ಹೊರಗೆಡವುತ್ತೇವೆ ಎಂದು ತಿಳಿಸಿದ್ದಾರೆ.
ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಬಿಜೆಪಿಯ ಸಿಎಂ ಅಭ್ಯರ್ಥಿಯಾಗಿರುವ ಬಿ.ಎಸ್. ಯಡಿಯೂರಪ್ಪ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ತಿಳಿಸಿರುವ ಕಾರಣ ರಾಜ್ಯದಲ್ಲಿ ಇದೊಂದು ತೀವ್ರ ಕುತೂಹಲ ಕೆರಳಿಸಿದೆ.
ಕೆಲ ದಿನಗಳ ಹಿಂದೆ ಬಿಎಸ್ವೈ ಕೂಡ ಕಾಂಗ್ರೆಸ್ ವಿರುದ್ಧ ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಟ್ವೀಟ್ ಮಾಡಿ ಕೊನೆಗೆ ಅದನ್ನು ಠುಸ್ ಪಟಾಕಿಯಾಗಿಸಿದ್ದರು. ಇದೀಗ ಅಂಥದ್ದೊಂದು ಮಾಹಿತಿ ಕಾಂಗ್ರೆಸ್ ಪಾಳಯದಿಂದ ಕೇಳಿ ಬಂದಿದ್ದು, ಅದೆಂತಹ ಮಹತ್ವದ ಮಾಹಿತಿ ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಜೆಪಿ ಸಭೆ ಇನ್ನೊಂದೆಡೆ ಇದ್ಯಾವುದರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಬಿಜೆಪಿ ನಾಯಕರು ಸರಣಿ ಸಭೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನದ ನಂತರವೂ ಕೇಂದ್ರ ಬಿಜೆಪಿ ನಾಯಕ ರಾಮ್ ಮಾದವ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಚುನಾವಣೆ ರಣತಂತ್ರ ರೂಪಿಸುತ್ತಿರುವ ಬಿಜೆಪಿ ವರಿಷ್ಠರು ಬಿಎಸ್ವೈ ವಿರುದ್ಧದ ಸ್ಫೋಟಕ ಮಾಹಿತಿ ಹೊರಗೆಡವುವ ಕಾಂಗ್ರೆಸ್ ನಾಯಕರ ಮಾಹಿತಿಗೆ ತಲೆ ಕೆಡಿಸಿಕೊಂಡಿಲ್ಲ.
Click this button or press Ctrl+G to toggle between Kannada and English