ಉಡುಪಿ: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಚೊಚ್ಚಲ ಪದಕ ಜಯಿಸಿಕೊಟ್ಟ ಕುಂದಾಪುರದ ಗುರುರಾಜ್ ಪೂಜಾರಿ ಅವರ ಸಾಧನೆ ಅವರಿಗೆ ಅವಕಾಶದ ಭಾಗ್ಯದ ಬಾಗಿಲನ್ನು ತೆರೆದುಕೊಟ್ಟಿದೆ.
ರಾಜ್ಯದ ಕ್ರೀಡಾಪಟುವೊಬ್ಬನ ಈ ಸಾಧನೆಗೆ ಅತೀವ ಹರ್ಷ ವ್ಯಕ್ತಪಡಿಸಿದ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಇದಕ್ಕಾಗಿ ಗುರುರಾಜ್‌ರನ್ನು ಸರಕಾರದ ಪರವಾಗಿ ಅಭಿನಂದಿಸಿದ್ದಾರೆ.
‘ರಾಜ್ಯದ ಕ್ರೀಡಾ ಸಚಿವನಾಗಿ ಗುರುರಾಜ್‌ರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಇದಕ್ಕಿಂತ ಸಂತೋಷದ ಕ್ಷಣ ಬೇರೆ ಇಲ್ಲ. ತಿಂಗಳ ಹಿಂದಷ್ಟೇ ಏಕಲವ್ಯ ಪ್ರಶಸ್ತಿಯನ್ನು ಗುರುರಾಜ್‌ಗೆ ನೀಡಲಾಗಿತ್ತು. ಇದೀಗ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಗುರುರಾಜ್‌ಗೆ ಸರಕಾರದ ಗ್ರೂಪ್ ‘ಬಿ’ ಉದ್ಯೋಗ ಸಿಗುತ್ತದೆ. ಜೊತೆಗೆ 25 ಲಕ್ಷ ರೂ.ಗಳ ಬಹುಮಾನವೂ ದೊರಕಲಿದೆ ಎಂದವರು ತಿಳಿಸಿದರು.
ರಾಜ್ಯದ ಕ್ರೀಡಾನೀತಿಯನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಇದರಲ್ಲಿ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಇದೆ. ಇದಕ್ಕಾಗಿ 48 ಕೋಟಿ ರೂ. ಈಗಾಗಲೇ ಮೀಸಲಿಟ್ಟು ವಿತರಿಸಲಾಗಿದೆ. ಈಗ ಕಾನೂನಿನಂತೆ ಗುರುರಾಜ್‌ಗೆ ಈ ಪ್ರೋತ್ಸಾಹಕ ಮೊತ್ತ ಹಾಗೂ ಸರಕಾರಿ ಕೆಲಸ ಸಿಗುತ್ತದೆ ಎಂದು ಅವರು ವಿವರಿಸಿದರು.
‘ಖೇಲೋ ಇಂಡಿಯಾದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕ್ರೀಡಾಪಟು ಗಳ ಬೆಂಬಲಕ್ಕೆ ಸರಕಾರ ಸದಾ ಸಿದ್ಧವಿದೆ. ಒಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಪಟು ಗಳು ಸಾಧನೆ ಮಾಡಬೇಕಿದೆ, ಇದಕ್ಕೆ ಒಂದು ದಿನದ ಪರಿಶ್ರಮ ಸಾಲದು. ನಿರಂತರ ಪರಿಶ್ರಮಕ್ಕೆ ಅಡಿಗಲ್ಲು ಹಾಲಾಗಿದೆ’ ಎಂದು ಅವರು ಹೇಳಿದರು.
ಶ್ರೀಮಂತರ ಮಕ್ಕಳಿಂದ ಇಂಥ ಸಾಧನೆ ಸಾಧ್ಯವಿಲ್ಲ. ಬಡವರ, ಮಧ್ಯಮ ವರ್ಗದ ಕುಟುಂಬದಿಂದ ಬಂದ ಗುರುರಾಜ್ ಪೂಜಾರಿಯಂಥವರಿಂದ ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯ ಎಂದು ಕ್ರೀಡಾ ಸಚಿವರು ತಿಳಿಸಿದರು.
Click this button or press Ctrl+G to toggle between Kannada and English