ಸುಳ್ಯ: ಬೇಸಗೆ ಕಾಲಿಟ್ಟ ಬೆನ್ನಲ್ಲೇ ಸುಳ್ಯ ತಾಲೂಕಿನಲ್ಲಿ ಕೊಳವೆಬಾವಿ ಕೊರೆಯುವ ಯಂತ್ರಗಳ ಸದ್ದು ಕೇಳಿ ಬರುತ್ತಿದೆ. ಪಕ್ಕದ ರಾಜ್ಯಗಳ ನೋಂದಣಿಯಿರುವ ಲಾರಿಗಳು ತಾಲೂಕಿನಲ್ಲಿ ಬೀಡುಬಿಟ್ಟಿವೆ. ಕಾನೂನನ್ನು ಉಲ್ಲಂ ಸಿ ಬೇಕಾಬಿಟ್ಟಿ ಭೂಮಿಗೆ ಕನ್ನ ಇಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕೆಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ನಗರ ಮಾತ್ರವಲ್ಲ, ಕುಗ್ರಾಮದಲ್ಲೂ ನೀರಿಗೆ ಬಂಗಾರದ ಬೆಲೆ ಬಂದಿದೆ. ಅದ ರಲ್ಲೂ ಕೃಷಿ ಅವಲಂಬಿತ ಸುಳ್ಯದ ಜನತೆಗೆ ನೀರಿನ ಅವಶ್ಯ ಹೆಚ್ಚೇ ಇದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ನದಿ, ಹಳ್ಳ, ಕೊಳ್ಳ, ಕೆರೆ, ಬಾವಿ, ತೋಡುಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಜಲಮೂಲ ಆಳಕ್ಕೆ ಹೋಗಿದೆ. ಒಂದೆರಡು ಬಾರಿ ಬಿದ್ದ ಮಳೆ ನೀರಿನ ಬವಣೆ ತೀರಿಸಿಲ್ಲ. ಹೀಗಾಗಿ ಕೊಳವೆ ಬಾವಿಯಿಂದ ನೀರು ಪಡೆಯುವುದು ಅನಿವಾರ್ಯ.
ನೀರಿನ ಅಗತ್ಯ ಇದೆ ಎಂಬ ಕಾರಣಕ್ಕೆ ಬೇಕಾಬಿಟ್ಟಿ ಕೊಳವೆ ಬಾವಿ ಕೊರೆಯುವುದು ಸರಿಯಲ್ಲ. ಇದಕ್ಕೂ ಮೂಗುದಾರ ಹಾಕಬೇಕಿದೆ. ಕೊಳವೆ ಬಾವಿ ಕೊರೆಯಲು ಜಿಲ್ಲಾ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ. ಸರಕಾರದ ಸುತ್ತೋಲೆ ಪ್ರಕಾರ, ಸಾರ್ವಜನಿಕ ಕೊಳವೆ ಬಾವಿಗಳ 500 ಮೀ. ವ್ಯಾಪ್ತಿಯಲ್ಲಿ ಕೊಳವೆಬಾವಿ ಹೊಂದಲು ಸ್ಥಳೀಯಾಡಳಿತದ ನಿರಾಕ್ಷೇಪಣ ಪತ್ರದ ಅಗತ್ಯವಿದೆ.ಆದರೆ, ಕಾನೂನನ್ನು ಗಾಳಿಗೆ ತೂರಿ ಬೋರ್‌ವೆಲ್ ಕೊರೆಯಲಾಗುತ್ತಿದೆ.
ತಾಲೂಕಿನಲ್ಲಿರುವ ಕೊಳವೆ ಬಾವಿಗಳೆಷ್ಟು ಎಂಬ ಲೆಕ್ಕ ಸಿಗುತ್ತಿಲ್ಲ. ಹಿಂದಿನ ವರ್ಷ 885 ಕೊಳವೆ ಬಾವಿಗಳಿದ್ದವು. ಸುಸ್ಥಿತಿಯಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ ಕೇವಲ 188. ಉಳಿದ 697 ನಿರುಪಯುಕ್ತ ಆಗಿವೆ. ಆದರೆ, ಇದೂ ಅಂದಾಜು ಅಷ್ಟೇ. ಸ್ಪಷ್ಟ ಮಾಹಿತಿ ಇಲಾಖೆ ಬಳಿ ಇಲ್ಲ. ಈ ಬಾರಿ ಖಾಸಗಿ ಜಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ. ಕೃಷಿಕರಷ್ಟೇ ಅಲ್ಲದೆ, 5-10 ಸೆಂಟ್ಸ್ ಜಾಗ ಇದ್ದವರೂ ಬೋರ್ ವೆಲ್ ಕೊರೆಸುತ್ತಿದ್ದಾರೆ. ಇವು ಇಲಾಖೆಯ ಮಾಹಿತಿ ಪಟ್ಟಿಯಲ್ಲಿಲ್ಲ.
ಕಳೆದ ಬೇಸಗೆಯಲ್ಲಿ ಅಂತರ್ಜಲ ಕುಸಿತ ಕಂಡು ಕುಡಿಯುವ ನೀರಿಗೂ ಕೊರತೆ ಎದುರಾಗಿತ್ತು. ಕೊಳವೆಬಾವಿ ಕೊರೆಸಲು ಜನ ಮುಂದಾಗಿದ್ದರೂ ಅವಕಾಶ ನಿರಾಕರಿಸಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಸರಕಾರ ಕೊಳವೆ ಬಾವಿ ವಿಚಾರದಲ್ಲಿ ಕಠಿನ ನಿಯಮ ಜಾರಿಗೆ ತಂದಿತ್ತು. ನಿಯಮ ಸಡಿಲಗೊಳಿಸಿದರೆ ಜಿಲ್ಲಾಡಳಿತವೇ ಹೊಣೆ ಎಂದಿತ್ತು. ಈ ನಡುವೆ ಅಲ್ಲಲ್ಲಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದನ್ನು ಅಧಿಕಾರಿಗಳು ತಡೆದಿದ್ದರು. ಈ ಬಾರಿಯೂ ಅಂಥದೇ ಕಠಿನ ನಿಯಮಗಳನ್ನು ಜಾರಿಗೆ ತರುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಹೊಸದಾಗಿ ತಲೆ ಎತ್ತುವ ಬೃಹತ್ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಸಮರ್ಪಕವಾಗಿ ಜಾರಿಗೊಂಡಿಲ್ಲ. ಬಹುತೇಕ ಕಡೆಗಳಲ್ಲಿ ಮಳೆಗಾಲದಲ್ಲಿ ಮಳೆನೀರು ಚರಂಡಿಗಳಲ್ಲೇ ಹರಿಯುತ್ತದೆ. ಸರಕಾರಿ ಕಚೇರಿಗಳೂ ಮಳೆಕೊಯ್ಲು ಅಳವಡಿಸಿಕೊಂಡಿಲ್ಲ. ಬೋರ್‌ವೆಲ್‌ಗಳಿಗೆ ನೀರಿಂಗಿಸುವ ಯೋಜನೆಗಳನ್ನೂ ಗ್ರಾ.ಪಂ.ಗಳು ಅನುಷ್ಠಾನ ಮಾಡಿಲ್ಲ. ರೈತರೂ ಆಧುನಿಕ ಕೃಷಿ ಪದ್ಧತಿಗೆ ಮಾರು ಹೋಗಿದ್ದರಿಂದ ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿ ಕಣ್ಮರೆಯಾಗುತ್ತಿದೆ. ರಸಗೊಬ್ಬರ ಬಳಕೆ ಹೆಚ್ಚುತ್ತಿದೆ. ಭೂಮಿಯ ಫಲವತ್ತತೆ ಮಟ್ಟ ಇಳಿಕೆಯಾಗುತ್ತಿದೆ. ಸುಮಾರು 200 ಅಡಿಗಳಷ್ಟು ಆಳಕ್ಕೆ ಇಳಿಯುತ್ತಿದ್ದ ಎರೆಹುಳುಗಳು ಭೂಮಿಯ ಫಲವತ್ತತೆ ಹಾಗೂ ಅಂತರ್ಜಲ ಮಟ್ಟ ಏರಿಕೆಗೆ ಸಹಕಾರಿಯಾಗಿದ್ದವು. ಅವೂ ರಾಸಾಯ ನಿಕ ಗೊಬ್ಬರಗಳಿಂದ ಸಾಯುತ್ತಿವೆ.
ತಾಲೂಕಿನಲ್ಲಿ 100ಕ್ಕೂ ಅಧಿಕ ವೆಂಟೆಡ್ ಡ್ಯಾಮ್‌ಗಳಿದ್ದರೂ, ಬಹುತೇಕ ಕಡೆಗಳಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಹೊಂದಿಲ್ಲ. ಕೆಲ ಡ್ಯಾಮ್ ಗಳು ಮಾತ್ರ ನಿರ್ವಹಣೆ ಆಗುತ್ತಿವೆ. ಡ್ಯಾಮ್ ಆರಂಭದ ವರ್ಷ ಕೃಷಿ ಇಲಾಖೆ ಹಲಗೆ ನೀಡುತ್ತದೆ. ಆದರೆ ರೈತರು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಒಂದೇ ವರ್ಷದಲ್ಲಿ ನೀರು ಹರಿದು ಹೋಗುತ್ತದೆ. ಮತ್ತೆ ಡ್ಯಾಮ್‌ಗೆ ಹಲಗೆ ಹಾಕುವ ಗೋಜಿಗೆ ಹೋಗುವುದಿಲ್ಲ.
Click this button or press Ctrl+G to toggle between Kannada and English