ಮುಂಬೈ: ಕ್ರಿಕೆಟ್ ಅಭಿಮಾನಿಗಳ ಭಾವಾವೇಶ, ಮನರಂಜನೆ, ಉತ್ಸುಕತೆಗೆ ಕಾರಣವಾದ ಐಪಿಎಲ್ ಟಿ-20 ಟೂರ್ನಿ ಇಂದಿನಿಂದ ಆರಂಭಗೊಳ್ಳಲಿದ್ದು, ವಿಶ್ವದ ಶ್ರೀಮಂತ ಟಿ-20 ಟೂರ್ನಿಯ 11ನೇ ಆವೃತ್ತಿಗೆ ಮುಂಬೈನಲ್ಲಿ ಇಂದು ಸಂಜೆ ವಿದ್ಯುಕ್ತ ಚಾಲನೆ ಸಿಗಲಿದೆ.
ಕ್ರಿಕೆಟಿಗರಿಗೆ ಬದುಕು ಕಟ್ಟಿಕೊಟ್ಟ, ಅವಕಾಶಗಳ ಹೆಬ್ಬಾಗಿಲು ತೆರೆಯುವಂತೆ ಮಾಡಿದ, ಖ್ಯಾತಿ-ಕೀರ್ತಿ ತಂದುಕೊಟ್ಟ, ವಿವಾದಗಳಿಂದಲೂ ಸದ್ದು ಮಾಡಿದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗುವುದಕ್ಕೂ ಮೊದಲು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ವರ್ಣರಂಜಿತ ಕಾರ್ಯಕ್ರಮಕ್ಕೆ ವಾಂಖೆಡೆ ಮೈದಾನ ಆತಿಥ್ಯ ವಹಿಸಲಿದೆ.
ಕಳೆದ 10 ಟೂರ್ನಿಗಳಿಗೆ ಹೋಲಿಕೆ ಮಾಡಿದಾಗ ಈ ಸಲ ಎಲ್ಲ ತಂಡಗಳು ಸಮತೋಲನದಿಂದ ಕೂಡಿದ್ದು, ಭಾರೀ ಫೈಪೋಟಿ ಉಂಟಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಜತೆಗೆ ಹೊಸದಾಗಿ ಆಯ್ಕೆಗೊಂಡಿರುವ ಕೆಲ ಪ್ರತಿಭೆಗಳು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲು ಐಪಿಎಲ್ ಉತ್ತಮ ವೇದಿಕೆಯಾಗಲಿದೆ.
ಉಳಿದಂತೆ ಭಾನುವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆತಿಥೇಯ ಕೆಕೆಆರ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಯಾನಕ್ಕೆ ಚಾಲನೆ ಸಿಗಲಿದೆ.
Click this button or press Ctrl+G to toggle between Kannada and English