ಶಬ್ಧ ಮಾಲಿನ್ಯ ಉಂಟು ಮಾಡುವ ಬಸ್‌ಗಳ ವಿರುದ್ಧ ಕಠಿನ ಕ್ರಮ: ಡಿಸಿಪಿ

12:33 PM, Saturday, April 7th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sound-pollutionಮಂಗಳೂರು: ನಗರದಲ್ಲಿ ಕರ್ಕಶ ಹಾರ್ನ್ ಮೂಲಕ ಶಬ್ದ ಮಾಲಿನ್ಯ ಉಂಟು ಮಾಡುವ ಬಸ್‌ಗಳ ವಿರುದ್ಧ ಕಠಿನ ಕ್ರಮ ಜರಗಿಸಲಾಗುವುದು ಎಂದು ಮಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ ಅವರು ತಿಳಿಸಿದರು. ಮಂಗಳೂರು ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಕರ್ಕಶ ಹಾರ್ನ್ ಹಾಕುವ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಹಲವು ಬಾರಿ ಮನವಿ ಮಾಡಲಾಗಿದೆ; ಫೋನ್‌ ಇನ್‌ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾವಿಸಲಾಗಿದೆ. ಆದರೆ ಸಮಸ್ಯೆಗೆ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಕೆಲವು ಬಸ್‌ಗಳಲ್ಲಿ ಬ್ರೇಕ್‌ನೊಂದಿಗೆ ಹಾರ್ನ್ ಜೋಡಣೆಯಾಗಿರುತ್ತದೆ. ಹಾಗಾಗಿ ಹಾರ್ನ್ ಮಾಡುವ ಉಪಕರಣ ಕೀಳಲು ಹೋದರೆ ಎಂಜಿನ್‌ಗೆ ಹಾನಿಯಾಗುತ್ತದೆ ಎಂದು ಟ್ರಾಫಿಕ್‌ ಇನ್‌ಸ್ಪೆಕ್ಟರ್‌ ಸುನಿಲ್‌ ಕುಮಾರ್‌ ಹೇಳಿದರು.

ಡಿಸಿಪಿ ಹನುಮಂತರಾಯ ಪ್ರತಿಕ್ರಿಯಿಸಿ, ಕರ್ಕಶ ಹಾರ್ನ್ ಬಗ್ಗೆ ಸಾರ್ವಜನಿಕರಿಂದ ಸತತವಾಗಿ ದೂರುಗಳು ಬರುತ್ತಿರುವ ಕಾರಣ ಯಾವುದೇ ದಾಕ್ಷಿಣ್ಯ ಇಲ್ಲದೆ ಬಸ್‌ಗಳ ಕರ್ಕಶ ಹಾರ್ನ್ಗಳನ್ನು ತೆರವು ಮಾಡಿ; ಅಗತ್ಯ ಬಿದ್ದರೆ ಬಸ್‌ಗಳನ್ನು ಸೀಜ್‌ ಮಾಡಿ ಎಂದು ಟ್ರಾಫಿಕ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾನೂನಿನ ಪ್ರಕಾರ ವಾಹನಗಳ ಹಾರ್ನ್ ಶಬ್ದ ವಾಣಿಜ್ಯ ಪ್ರದೇಶಗಳಲ್ಲಿ 65 ಡೆಸಿಬಲ್‌ ಹಾಗೂ ವಸತಿ ಪ್ರದೇಶಗಳಲ್ಲಿ 55 ಡೆಸಿಬಲ್‌ಗಿಂತ ಜಾಸ್ತಿ ಇರ ಕೂಡದು ಎಂದು ಅವರು ವಿವರಿಸಿದರು.

ನಗರದಲ್ಲಿ ಕೆಲವು ವ್ಯಾಪಾರ ಮಳಿಗೆಗಳ ಎದುರಿನ ಜಾಗ ಪಾರ್ಕಿಂಗ್‌ ಝೋನ್‌ ಎಂಬುದಾಗಿ ಈಗಾಗಲೇ ಘೋಷಿಸಲಾಗಿದ್ದರೂ ಈಗ ಅಲ್ಲಿ ಅಂಗಡಿ ಮಳಿಗೆಗಳವರು ನೋ ಪಾರ್ಕಿಂಗ್‌ ಬೋರ್ಡ್‌ ಹಾಕುತ್ತಾರೆ. ಇದರಿಂದ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಮತ್ತು ಸಾರಿಗೆ ಅಧಿಕಾರಿಗಳಿಗೆ ಹಲವುಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಮಾಜಿ ಶಾಸಕ ಕೆ. ವಿಜಯ ಕುಮಾರ್‌ ಶೆಟ್ಟಿ ಅಹವಾಲು ತೋಡಿಕೊಂಡರು.

ಈ ಕುರಿತಂತೆ ಪೊಲೀಸ್‌ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸಿ ಕ್ರಮ ಕೈಗೊಳ್ಳುವರು ಎಂದು ಡಿಸಿಪಿ ಹನುಮಂತರಾಯ ಅವರು ವಿವರಿಸಿದರು.

ಕೊಣಾಜೆಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯ ಸ್ಥಾಪನೆಗೆ 750 ಎಕ್ರೆ ಜಾಗವನ್ನು ಸ್ವಾಧೀನ ಪಡಿಸಲಾಗಿದ್ದು, ವಿ.ವಿ. ಸ್ಥಾಪನೆಯಾಗಿ 35 ವರ್ಷ ಕಳೆದಿವೆ. ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡುವಾಗ ಅನೇಕ ಮಂದಿಯನ್ನು ಒಕ್ಕಲೆಬ್ಬಿಸಲಾಗಿದ್ದು, ಅವರ ಕುಟುಂಬಗಳಿಗೆ ಉದ್ಯೋಗಾವಕಾಶದ ಭರವಸೆ ನೀಡಲಾಗಿತ್ತು. ಆದರೆ ಮೂರುವರೆ ದಶಕ ಕಳೆದರೂ ಭರವಸೆ ಈಡೇರಿಲ್ಲ. ಬದಲಾಗಿ ಈಗ ಹಾಸ್ಟೆಲ್‌ಗ‌ಳ ಕೊಳಚೆ ನೀರನ್ನು ಆಸು ಪಾಸಿನ ವಸತಿ ಪ್ರದೇಶಗಳಿಗೆ ಬಿಟ್ಟು ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು. ಈ ಬಗ್ಗೆ ವಿಶ್ವ ವಿದ್ಯಾನಿಲಯದ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ತಿಳಿಸಿದರು.

ಚುನಾವಣೆ ಉದ್ದೇಶಕ್ಕೆ ಬಳಸಿಕೊಳ್ಳುವ ಟ್ಯಾಕ್ಸಿಗಳಿಗೆ ಸೂಕ್ತ ಬಾಡಿಗೆ ನೀಡಲಾಗುತ್ತಿಲ್ಲ ಎಂದು ಟ್ಯಾಕ್ಸಿ ಮಾಲಕರೊಬ್ಬರು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ, ಚುನಾವಣೆಗೆ ಬಳಸಿಕೊಳ್ಳುವವಾಹನಗಳಿಗೆ ಸಾರಿಗೆ ಇಲಾಖೆ ಬಾಡಿಗೆ ನಿಗದಿ ಪಡಿಸುತ್ತದೆ. ಅದರ ಪ್ರಕಾರ ಬಾಡಿಗೆ ನೀಡಲಾಗುತ್ತದೆ ಎಂದರು.

ಮಂಗಳೂರು- ಪಡುಬಿದ್ರೆ- ಕಾರ್ಕಳ ಮಾರ್ಗದಲ್ಲಿ ಬೆಳಗ್ಗೆ 7ರಿಂದ 9.30ರ ಮಧ್ಯೆ ಹೆಚ್ಚುವರಿ ಬಸ್‌ ಸೌಲಭ್ಯ ಬೇಕು ಎಂಬ ಬೇಡಿಕೆಗೆ ಪ್ರತಿಕ್ರಿಯಿಸಿದ ಡಿಸಿಪಿ, ಈ ಬಗ್ಗೆ ಅಧ್ಯಯನ ನಡೆಸಿ ಮುಂದಿನ ಕ್ರಮ ಜರಗಿಸಲಾಗುವುದು ಎಂದರು.

ಇದು 77ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 18 ಕರೆಗಳು ಬಂದವು. ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಳಾದ ಕುಮಾರ ಸ್ವಾಮಿ ಮತ್ತು ಸುನೀಲ್‌ ಕುಮಾರ್‌, ಸಬ್‌ ಇನ್‌ಸ್ಪೆಕ್ಟರ್‌ ಇರಾವತಿ ಚಂದ್ರಾವಕರ್‌, ಎಎಸ್‌ಐ ಯೂಸುಫ್‌, ಹೆಡ್‌ಕಾನ್ಸ್‌ಟೆಬಲ್‌ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

ಆಸ್ಪತ್ರೆಗಳು ಮತ್ತು ಶಾಲಾ ಪರಿಸರಗಳನ್ನು ‘ನೋ ಹಾರ್ನ್ ಝೋನ್‌’ಗಳೆಂಬುದಾಗಿ ಈಗಾಗಲೇ ಘೋಷಿಸಲಾಗಿದೆ. ಇನ್ನೂ ಕೆಲವು ಪ್ರದೇಶಗಳಿಗೆ ‘ನೋ ಹಾರ್ನ್ ಝೋನ್‌’ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವ ಇದ್ದು, ಎಲ್ಲೆಲ್ಲಿ ಈ ರೀತಿಮಾಡ ಬೇಕೆನ್ನುವ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಟ್ರಾಫಿಕ್‌ ಮತ್ತು ಅಪರಾಧ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English