ಬೆಂಗಳೂರು : ಬಿಜೆಪಿ ಮೂರು ಸುತ್ತಿನ ಸಮೀಕ್ಷೆ ನಂತರ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ತನ್ನ 72 ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಈಗಾಗಲೇ ಜೆಡಿಎಸ್ ಪಕ್ಷ 126 ಅಭ್ಯರ್ಥಿಗಳ ಅಧಿಕೃತ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಇನ್ನೂ ತನ್ನ ಪಟ್ಟಿ ಪ್ರಕಟಿಸಿಲ್ಲ.
ಪ್ರಧಾನಿ ಮೋದಿ ನೇತೃತ್ವದ ಚುನಾವಣಾ ಸಮಿತಿ ಭಾನುವಾರದಂದು ಸಭೆ ಸೇರಿ ಈ ಬಗ್ಗೆ ಅಂತಿಮ ನಿರ್ಣಯ ಕೈಗೊಂಡಿದೆ. ನವದೆಹಲಿಯಲ್ಲಿ ಜೆ.ಪಿ ನಡ್ಡಾ ಅವರು ಸುದ್ದಿಗೋಷ್ಠಿ ನಡೆಸಿ, ಅಧಿಕೃತವಾಗಿ ಪಟ್ಟಿ ಪ್ರಕಟಿಸಿದರು.
ದೆಹಲಿಯ ಮಹಾನಗರ ಪಾಲಿಕೆ ಹಾಗೂ ಉತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಿದ ಮಾನದಂಡವನ್ನೇ ಕರ್ನಾಟಕದಲ್ಲೂ ಅಮಿತ್ ಶಾ ಪಾಲಿಸುತ್ತಿದ್ದಾರೆ. ಇದು ಬಿಜೆಪಿಯ ಹಾಲಿ ಶಾಸಕರು ಹಾಗೂ ಕೆಲವು ಮುಖಂಡರಿಗೆ ಭಾರೀ ಇರಿಸು-ಮುರಿಸು ತಂದಿತ್ತು.
ಮೊದಲ ಪಟ್ಟಿಯಂತೆ ಬಿಜೆಪಿಯ ಸಿಎಂ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಅವರು ಶಿಕಾರಿಪುರದಿಂದ ಸ್ಪರ್ಧಿಸಲಿದ್ದಾರೆ. ಅಫ್ಜಲ್ ಪುರ ವಿಧಾನಸಭೆಯಿಂದ ಮಾಲಿಕಯ್ಯ ಗುತ್ತೇದಾರ್, ಬಸವಕಲ್ಯಾಣದಿಂದ- ಮಲ್ಲಿಕಾರ್ಜುನ ಖೂಬಾ ಅವರಿಗೆ ಟಿಕೆಟ್ ಸಿಕ್ಕಿದೆ.
ದಕ್ಷಿಣ ಕನ್ನಡ ಹಾಗೂ ಉಡುಪಿಯ ಪೂರ್ತಿ ಪಟ್ಟಿ ಇನ್ನು ಲಭ್ಯವಾಗಿಲ್ಲ ಕಾರ್ಕಳದಲ್ಲಿ ಸುನಿಲ್ ಕುಮಾರ್, ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ದಕ್ಷಿಣ ಕನ್ನಡದ ಏಕೈಕ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಪ್ರಕಟಿಸಲಾಗಿದ್ದು ಸುಳ್ಯದಲ್ಲಿ ಅಂಗಾರ ಅವರು ಸ್ಪರ್ಧಿಸಲಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಜಿಲ್ಲಾಧ್ಯಕ್ಷ ರುದ್ರೇಗೌಡರ ಬದಲಿಗೆ ಕೆ.ಎಸ್. ಈಶ್ವರಪ್ಪ ಅವರಿಗೆ ಮಣೆ ಹಾಕಲಾಗಿದೆ. ಅಫ್ಜಲ್ ಪುರದಲ್ಲಿ ಮಾಲಿಕಯ್ಯ ಗುತ್ತೇದಾರ್‌ಗೆ ಟಿಕೆಟ್ ಒಲಿದಿದ್ದರೆ, ಚಿಕ್ಕಮಗಳೂರು ಮತ್ತು ಶೃಂಗೇರಿಯಲ್ಲಿ ಹಾಲಿ ಶಾಸಕರಾಧ ಸಿ.ಟಿ. ರವಿ ಮತ್ತು ಡಿ.ಎನ್. ಜೀವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.
ಹೊಸಕೋಟೆಯಲ್ಲಿ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಪದ್ಮನಾಭನಗರದಿಂದ, ಅರವಿಂದ ಲಿಂಬಾವಳಿ ಮಹಾದೇವಪುರ ಮೀಸಲು ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲಿದ್ದಾರೆ. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೀಶ್ವರ್, ಅಥಣಿಯಲ್ಲಿ ಲಕ್ಷ್ಮಣ್ ಸವದಿ, ಹುಕ್ಕೇರಿಯಲ್ಲಿ ಉಮೇಶ್ ಕತ್ತಿ, ಅರಭಾವಿಯಲ್ಲಿ ಬಾಲಚಂದ್ರ ಜಾರಕೀಹೊಳಿಗೆ ಟಿಕೆಟ್ ನೀಡಲಾಗಿದೆ.
ತುಮಕೂರು ಗ್ರಾಮಾಂತರದಲ್ಲಿ ಬಿ.ಸುರೇಶ್ ಗೌಡರಿಗೆ ಟಿಕೆಟ್ ನೀಡಲಾಗಿದ್ದು, ಸೊಗಡು ಶಿವಣ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸವದತ್ತಿ ಎಲ್ಲಮ್ಮ ಕ್ಷೇತ್ರದಿಂದ ಆನಂದ್ ವಿಶ್ವನಾಥ್ ಮಾಮನಿಗೆ ಮತ್ತು ಮುದ್ದೇಬಿಹಾಳದಿಂದ ಎ.ಎಸ್. ಪಾಟೀಲ್ ನಡಹಳ್ಳಿಗೆ ಟಿಕೆಟ್ ನೀಡಲಾಗಿದೆ.
ಮೊಳಕಾಲ್ಮೂರು ಮೀಸಲು ಕ್ಷೇತ್ರದಲ್ಲಿ ಸಂಸದ ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗಿದೆ. ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್‌ಗೆ, ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಗೆ, ಹಾನಗಲ್‌ನಲ್ಲಿ ಸಿ.ಎಂ. ಉದಾಸಿ. ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಅವಕಾಶ ಕಲ್ಪಿಸಲಾಗಿದೆ.
ಬಸವಕಲ್ಯಾಣದಿಂದ ಇತ್ತೀಚೆಗೆ ಸೇರ್ಪಡೆಗೊಂಡ ಮಲ್ಲಿಕಾರ್ಜುನ ಖೂಬಾ, ಲಿಂಗಸೂಗೂರು ಮೀಸಲು ಕ್ಷೇತ್ರದಿಂದ ಮಾನಪ್ಪ ವಜ್ಜಲ್ ಅವರನ್ನು ಕಣಕ್ಕಿಳಿಸಲಾಗಿದೆ.
ಎರಡನೇ ಹಂತದ ಟಿಕೆಟ್ ಪಟ್ಟಿ ಘೋಷಣೆ ಸೋಮವಾರ ನಡೆಯಲಿದೆ
Click this button or press Ctrl+G to toggle between Kannada and English