ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಪಿರುವುದಕ್ಕೆ ಟಿಕೆಟ್ ಆಕಾಂಕ್ಷಿ ಹಾಗೂ ಚಿತ್ರನಟಿ ಅಮೂಲ್ಯ ಅವರ ಮಾವ ರಾಮಚಂದ್ರ ಅಸಮಾಧಾನ ಹೊರಹಾಕಿದ್ದಾರೆ.
ಟಿಕೆಟ್ ಕೈತಪ್ಪಲು ಸಂತೋಷ್ ಜಿ ಪ್ರಮುಖ ಕಾರಣವಾಗಿದ್ದು, ಎರಡು ದಿನಗಳಲ್ಲಿ ಟಿಕೆಟ್ ನೀಡದಿದ್ದರೆ ಪಕ್ಷ ತೊರೆದು ಪಕ್ಷೇತರವಾಗಿ ಕಣಕ್ಕಿಳಿಯುವ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆರ್.ಆರ್. ನಗರ ಕ್ಷೇತ್ರಕ್ಕೆ ತುಳಸಿ ಮುನಿರಾಜು ಗೌಡ ಹೆಸರು ಅಂತಿಮಗೊಂಡ ಹಿನ್ನೆಲೆಯಲ್ಲಿ ರಾಮಚಂದ್ರ ಅವರು ಕಾರ್ಯಕರ್ತರ ಸಭೆ ನಡೆಸಿದರು. ಪಕ್ಷದ ಮುಖಂಡರಿಗೆ ಮತ್ತೊಂದು ಅವಕಾಶ ನೀಡಿ ನಂತರ ಮುಂದಿನ ನಿರ್ಧಾರ ಕೈಗೊಳ್ಳುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಂಡರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ, ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಾಗಿದೆ. ನನಗೂ ಟಿಕೆಟ್ ಸಿಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಕಳೆದ ಎರಡು ಬಾರಿ ಆಕಾಂಕ್ಷಿಯಾಗಿದ್ದೆ, ಪಕ್ಷದ ಹಿರಿಯರ ಮಾರ್ಗದರ್ಶನದ ಮೇರೆಗೆ ಕಳೆದ ಬಾರಿ ಟಿಕೆಟ್‌ನ್ನು ನಾನೇ ನಿರಾಕರಿಸಿದ್ದೆ. ಈ ಬಾರಿ ನನಗೇ ಟಿಕೆಟ್ ನೀಡುವ ವಿಶ್ವಾಸವಿತ್ತು. ಆದರೆ ಹೊರಗಿನ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ, ಪಕ್ಷದ ಮುಖಂಡರು ನನಗೆ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಪಂಚಾಯತ್ ಚುನಾವಣೆಯಿಂದಲೂ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆದರೆ ಯಾರನ್ನೋ ಓಲೈಸಲು ಪರರಿಗೆ ಮಣೆ ಹಾಕಲಾಗಿದೆ. ಮುನಿರಾಜು ಗೌಡ ತನ್ನ ವಿರುದ್ಧ ಷಡ್ಯಂತ್ರ ಮಾಡಿ ಟಿಕೆಟ್ ತಪ್ಪುವಂತೆ ಮಾಡಿದ್ದಾರೆ. ಅಭ್ಯರ್ಥಿ ಘೋಷಣೆ ಅಷ್ಟೇ ಆಗಿದೆ. ಆದರೆ ಬಿ ಫಾರಂ ನನಗೆ ನೀಡಬೇಕೆಂದು ಆಗ್ರಹಿಸಿದರು.
ಯಾವ ಮಾನದಂಡ ಇಟ್ಟುಕೊಂಡು ಮುನಿರಾಜುಗೌಡಗೆ ಟಿಕೆಟ್ ನೀಡಿದ್ದಾರೆಂದು ಗೊತ್ತಿಲ್ಲ. ಈ ಹಿಂದೆಯೂ ಜೆಡಿಎಸ್ ಹಾಗೂ ಕೆಜೆಪಿಗೆ ಕರೆದಿದ್ದರು ಆಗ ನಾನು ಪಕ್ಷ ಬಿಟ್ಟಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದು, ಟಿಕೆಟ್ ಕೈ ತಪ್ಪಿದ್ದಕ್ಕೆ ಬೇಸರವಿದೆ. ಬಿಬಿಎಂಪಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಸರಿಯಲ್ಲ. ರಾಜಕೀಯ ಅನುಭವ ಇಲ್ಲದವರಿಗೆ ಟಿಕೆಟ್ ನೀಡಿದ್ದಾರೆ ಎಂದು ಕಿಡಿಕಾರಿದರು.
ನಟಿ ಅಮೂಲ್ಯ ಮಾತನಾಡಿ, ನಮ್ಮ ಮಾವನಿಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೂ ಬೇಸರ ಆಗಿದೆ. ಈ ಬಾರಿ ಅವರಿಗೆ ಟಿಕೆಟ್ ನೀಡಬೇಕಿತ್ತು. ನಮ್ಮ ಮಾವ ಪಕ್ಷ ಸಂಘಟನೆಗಳಿಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಅವರ ಶ್ರಮಕ್ಕೆ ಬೆಲೆ ಸಿಗಬೇಕು ಅಂದರೆ ಟಿಕೆಟ್ ನೀಡಬೇಕು. ಅವರ ನಿರ್ಧಾರವನ್ನು ನಾವು ಸಹ ಬೆಂಬಳಿಸುತ್ತೇವೆ ಎಂದರು.
Click this button or press Ctrl+G to toggle between Kannada and English