ಮಂಗಳೂರು: ಗೋ ಹಂತಕರ ಬಂಧನಕ್ಕಾಗಿ ಹಾಗೂ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಕಳೆದ ಒಂಭತ್ತು ದಿನಗಳಿಂದ ಪುಣ್ಯಕೋಟಿನಗರದ ಅಮೃತಧಾರಾ ಗೋಶಾಲೆಯಲ್ಲಿ ರಾಜಾರಾಮ ಭಟ್ ನೇತೃತ್ವದಲ್ಲಿ ನಡೆಯುತ್ತಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವು ಸೋಮವಾರ ಅಂತ್ಯಗೊಂಡಿತು.
ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಪುಣ್ಯಕೋಟಿನಗರದ ಗೋಶಾಲೆಗೆ ಆಗಮಿಸಿದ್ದ ರಾಜಾರಾಮ ಭಟ್ ಅವರಿಗೆ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಹಾಲು ನೀಡಿದ ಬಳಿಕ ಉಪವಾಸ ಸತ್ಯಾಗ್ರಹವು ಕೊನೆಗೊಂಡಿತು.
ಸೋಮವಾರ ಸಂಜೆ ದೇರಳಕಟ್ಟೆಯ ಆಸ್ಪತ್ರೆಗೆ ಭೇಟಿ ನೀಡಿ ರಾಜಾರಾಮ ಭಟ್ ಅವರ ಆರೋಗ್ಯ ವಿಚಾರಿಸಿದ ಪೊಲೀಸ್ ಕಮೀಷನರ್ ಸುರೇಶ್ ಅವರು ಭಟ್ ಅವರೊಂದಿಗೆ ಮಾತುಕತೆ ನಡೆಸಿ ಗೋ ಹಂತಕರನ್ನು ಶೀಘ್ರವಾಗಿ ಬಂಧಿಸಿ ನ್ಯಾಯವನ್ನು ಒದಗಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಭರವಸೆಯಂತೆ ರಾಜಾರಾಮ ಭಟ್ ಅವರು ಸತ್ಯಾಗ್ರಹವನ್ನು ಕೈ ಬಿಡುವ ಭರವಸೆಯನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಾಯಕ ಕಮಿಷನರ್ ಮಹೇಶ್ ಕರ್ಜಗಿ ಅವರು ಉಪಸ್ಥಿತರಿದ್ದರು.
ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ ಅವರು ಗೋ ಕಳ್ಳತನದ ಆರೋಪಿಗಳು ಯಾರೂ ಅಂತ ಗೊತ್ತಿದ್ದರೂ ಅಪರಾಧಿಗಳನ್ನು ಹಿಡಿಯುವಲ್ಲಿ ಸರಕಾರ, ಪೊಲೀಸ್ ಇಲಾಖೆ ನಿಷ್ಕ್ರೀಯಗೊಂಡಿರುವುದು ದೊಡ್ಡ ದುರಂತವಾಗಿದೆ ಮಾತ್ರವಲ್ಲದೆ ಇದು ನಾಚಿಕೆಗೇಡಿನ ವಿಚಾರವಾಗಿದೆ. ಗೋವಿಗಾಗಿ ನಡೆಯುವ ಮುಂದಿನ ಹೋರಾಟಕ್ಕೆ ನಾನು ಸದಾ ಸಿದ್ಧನಿದ್ದೇನೆ. ನೀವು ಕರೆದಾಗ ನಾನು ಖಂಡಿತಾ ಬರುತ್ತೇನೆ.
ಗೋ ಹಂತಕರ ಪತ್ತೆಗಾಗಿ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಕಳೆದ 9 ದಿನಗಳಿಂದ ರಾಜಾರಾಮ ಭಟ್ ಅವರು ಗೋವಿಗಾಗಿ ನಡೆಸಿದ ಉಪವಾಸ ಸತ್ಯಾಗ್ರಹವು ರಾಷ್ಟ್ರಮಟ್ಟದಲ್ಲಿ ಗೋವಿನ ಹೋರಾಟಕ್ಕೆ ಸ್ಪೂರ್ತಿ ತಂದಿದೆ. ಗೋವಿಗಾಗಿ ನಡೆಯುವ ಇಂತಹ ಹೋರಾಟವು ಮತ್ತಷ್ಟು ಪ್ರಬಲಗೊಂಡು ಎಲ್ಲರೂ ಇದಕ್ಕೆ ಕೈ ಜೋಡಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ರಾಜಾರಾಮ ಭಟ್ ಮಾತನಾಡಿ, ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಕೆಲವೇ ದಿನಗಳಲ್ಲಿ ಬಂಧಿಸುವ ಭರವಸೆಯನ್ನು ನೀಡಿದ್ದಾರೆ. ಈ ವಿಶ್ವಾಸದಿಂದ ಉಪವಾಸ ಸತ್ಯಾಗ್ರಹವನ್ನು ಇಂದು ಕೊನೆಗೊಳಿಸಿದ್ದೇನೆ. ಕಳೆದ ಒಂಭತ್ತು ದಿನಗಳಿಂದ ನಡೆದ ಹೋರಾಟಕ್ಕೆ ಎಲ್ಲರೂ ಜಾತಿ ಭೇದ ಮರೆತು ಬೆಂಬಲ ವ್ಯಕ್ತಪಡಿಸಿ ಹೋರಾಟದ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ. ಇನ್ನು ಎರಡು ತಿಂಗಳಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬರಲಿದ್ದು, ಬಳಿಕ ಹೊಸ ಸರಕಾರ ಗೋ ಹತ್ಯೆ ಕಾನೂನನ್ನು ಜಾರಿ ಮಾಡದೇ ಇದ್ದಲ್ಲಿ ಹೋರಾಟ ಮತ್ತೆ ಇಲ್ಲಿಂದಲೇ ಆರಂಭಗೊಳ್ಳಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಎಂ.ಬಿ,ಪುರಾಣಿಕ್, ಪ್ರಭಾವತಿ ನೀರೋಳಿಕೆ, ಸಂತೋಷ್ ಕುಮಾರ್ ಬೋಳಿಯಾರ್, ನಂದರಾಜ ಶೆಟ್ಟಿ ಪಿಜಿನ ಬೈಲ್, ಶರಣ್ ಪಂಪುವೆಲ್, ಗೋಪಾಲ್ ಕುತ್ತಾರ್, ರಾಧಾಕೃಷ್ಣ ಅಡ್ಯಂತ್ಯಾಯ, ಕೊಣಾಜೆ ಶಂಕರ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English