ಕರಾವಳಿಯಾ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿರುವ ಬಿಜೆಪಿ

5:40 PM, Tuesday, April 10th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

srinivas-shettyಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿರುವ ಬಿಜೆಪಿ, 72 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರಾವಳಿ ಜಿಲ್ಲೆಯ ಸುಳ್ಯ ಕ್ಷೇತ್ರದ ಎಸ್‌. ಅಂಗಾರ, ಕಾರ್ಕಳದ ಸುನೀಲ್‌ಕುಮಾರ್‌, ಕುಂದಾಪುರಕ್ಕೆ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅವರಿಗೆ ಮಾತ್ರ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಒಟ್ಟು 13 ವಿಧಾನಸಭಾ ಕ್ಷೇತ್ರಗಳ ಪೈಕಿ, ಸದ್ಯಕ್ಕೆ ಕಾರ್ಕಳ ಮತ್ತು ಸುಳ್ಯ ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಇನ್ನು ಹಾಲಾಡಿ ಪಕ್ಷೇತರರಾಗಿ ಆಯ್ಕೆಗೊಂಡು ಇದೀಗ ಬಿಜೆಪಿ ಸೇರಿದ್ದಾರೆ. ಹೀಗಾಗಿ ಇನ್ನುಳಿದ 10 ಕ್ಷೇತ್ರಗಳಲ್ಲಿ ಕಮಲ ಪಾಳೆಯ ಅಭ್ಯರ್ಥಿಗಳ ಆಯ್ಕೆ ವರಿಷ್ಠರ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಮೂಡುಬಿದಿರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ಹೆಚ್ಚಾಗಿರುವುದೇ ಮೊದಲ ಪಟ್ಟಿಯಲ್ಲಿ ಈ ಕ್ಷೇತ್ರಗಳ ಹೆಸರು ಕಾಣದೇ ಇರಲು ಪ್ರಮುಖ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

srinivas-shetty-2ಪ್ರಮುಖವಾಗಿ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಳೆದ ಬಾರಿ ಬಿ.ಎ. ಮೊಹಿಯುದ್ದೀನ್‌ ಬಾವ ಎದುರು ಸ್ಪರ್ಧಿಸಿ, ಪರಾಭವಗೊಂಡಿದ್ದ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್‌ ಅವರಿಗೂ ಮೊದಲ ಪಟ್ಟಿಯಲ್ಲಿ ಅವಕಾಶ ಸಿಗದೇ ಇರುವುದು ಇನ್ನಷ್ಟು ಕುತೂಹಲವನ್ನು ಉಂಟುಮಾಡಿದೆ. ಉತ್ತರ ಕ್ಷೇತ್ರದಲ್ಲಿ ಪಾಲೇಮಾರ್‌ ಹೊರತಾಗಿ ಮತ್ತಷ್ಟು ಆಕಾಂಕ್ಷಿಗಳು ಇದ್ದಾರೆ ಎನ್ನುವುದಕ್ಕೆ ಇದು ನಿದರ್ಶನ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್ ವಸಂತ ಬಂಗೇರ ಮತ್ತೆ ಕಣಕ್ಕೆ ಇಳಿಯುವುದು ಖಚಿತವಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಲೆಕ್ಕಾಚಾರ ನಡೆಯುತ್ತಿವೆ. ಕಳೆದ ಬಾರಿ ಪರಾಭವಗೊಂಡಿದ್ದ ರಂಜನ್‌ ಜಿ. ಗೌಡ ಹಾಗೂ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ ಪೂಂಜ ಬಿಜೆಪಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ.

ರಂಜನ್‌ ಗೌಡ ಈಗಾಗಲೇ ದೆಹಲಿಗೆ ತೆರಳಿದ್ದು, ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಗೌಡರು ಮತ್ತು ಬಿಲ್ಲವರ ನಡುವೆಯೇ ಸ್ಪರ್ಧೆ ನಡೆದುಕೊಂಡು ಬಂದಿದ್ದು, ಈ ಬಾರಿ ಗೌಡ ಸಮುದಾಯಕ್ಕೆ ಸೇರಿದ ತಮಗೆ ಅವಕಾಶ ನೀಡಬೇಕು ಎನ್ನುವುದು ರಂಜನ್‌ ಗೌಡ ಅವರ ವಾದವಾಗಿದೆ. ಇನ್ನು ಹರೀಶ್‌ ಪೂಂಜ ಕೂಡ, ಯುವ ಕಾರ್ಯಕರ್ತರ ಮೂಲಕ ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರುವ ಪ್ರಯತ್ನವನ್ನು ಮುಂದುವರಿಸಿದ್ದಾರೆ.

ಪುತ್ತೂರು ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್‌ ಮಠಂದೂರು ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನುವ ಮಾತುಗಳಿದ್ದರೂ, ಮೊದಲ ಪಟ್ಟಿಯಲ್ಲಿ ಹೆಸರು ಪ್ರಸ್ತಾಪ ಆಗದೇ ಇರುವುದರಿಂದ ಅಲ್ಲಿಯೂ ಪೈಪೋಟಿ ಹೆಚ್ಚಾಗಿರುವಂತೆ ಕಾಣುತ್ತಿದೆ. ಮೂಡುಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿಯೇ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದ್ದು, ಕಾಂಗ್ರೆಸ್‌ನಿಂದ ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದನ್ನು ನೋಡಿಕೊಂಡು, ಬಿಜೆಪಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ತಂತ್ರವನ್ನು ವರಿಷ್ಠರು ಅನುಸರಿಸುತ್ತಿದ್ದಾರೆ.

srinivas-shetty-3ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದೆ. ಗೌಡ ಸಾರಸ್ವತ ಬ್ರಾಹ್ಮಣರಾದ ಬದರಿನಾಥ ಕಾಮತ್‌ ಹಾಗೂ ಡಿ.ವೇದವ್ಯಾಸ್‌ ಕಾಮತ್‌ ಇಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್‌ ಚೌಟ, ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಸಹ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದಾರೆ ಎಂದು ಪಕ್ಷದ ಮುಖಂಡರು ಹೇಳುತ್ತಿದ್ದಾರೆ.

ಹಾಲಿ ಶಾಸಕರಿಗೆ ಅವಕಾಶ: ಬಿಜೆಪಿ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಮುಖಂಡರೊಬ್ಬರು ತಿಳಿಸಿದ್ದಾರೆ.

ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಇರುವುದು ನಿಜ. ಆದರೆ, ಈಗಾಗಲೇ ಪಕ್ಷದಿಂದ ಆಂತರಿಕ ಸಮೀಕ್ಷೆ ಮಾಡಲಾಗಿದೆ. ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಬಗ್ಗೆ ನಿರ್ಧರಿಸಲಾಗಿದೆ. ಹೀಗಾಗಿ ಉಳಿದ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬರುವ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸುಳ್ಯದಲ್ಲಿ ಎಸ್‌. ಅಂಗಾರ ಹಾಲಿ ಶಾಸಕರಾಗಿದ್ದು, ಅವರ ಆಯ್ಕೆಗೆ ವರಿಷ್ಠರ ಬಳಿ ಸೂಕ್ತ ಉತ್ತರವಿದೆ. ಆದರೆ, ಉಳಿದ ಏಳು ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು, ಈಗಲೇ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದರೆ, ಅಸಮಾಧಾನ ಭುಗಿಲೇಳಬಹುದು ಎನ್ನುವ ಆತಂಕ ಬಿಜೆಪಿ ರಾಜ್ಯ ನಾಯಕರದ್ದಾಗಿದೆ. ಹೀಗಾಗಿ ಕಾದು ನೋಡುವ ತಂತ್ರ ಅನುಸರಿಸುವ ಮೂಲಕ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಪಕ್ಷದ ರಾಜ್ಯ ನಾಯಕರು ಮುಂದಾಗಿದ್ದಾರೆ ಎನ್ನುವ ಮಾತುಗಳು ಬಿಜೆಪಿ ಜಿಲ್ಲಾ ಮುಖಂಡರಿಂದ ಕೇಳಿ ಬರುತ್ತಿವೆ.

ಸಚಿವರಾದ ಬಿ. ರಮಾನಾಥ ರೈ ಹಾಗೂ ಯು.ಟಿ. ಖಾದರ್ ಅವರ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಮುಂದಾಗಿರುವ ಬಿಜೆಪಿ ನಾಯಕರು, ಎರಡೂ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳಿಗೆ ಮಣೆ ಹಾಕಲು ನಿರ್ಧರಿಸಿದ್ದಾರೆ.‌ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ರಾಜೇಶ್‌ ನಾಯಕ್‌ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅದಾಗ್ಯೂ ಪ್ರಥಮ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಇನ್ನೊಂದೆಡೆ ಉಳ್ಳಾಲ ಕ್ಷೇತ್ರದಲ್ಲಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ಸಂಘ–ಪರಿವಾರ ಮುಂದಾಗಿದ್ದು, ಪ್ರಬಲ ಹಿಂದುತ್ವವಾದಿಗೆ ಬಿಜೆಪಿಯಿಂದ ಇಲ್ಲಿ ಟಿಕೆಟ್‌ ನೀಡಲು ನಿರ್ಧರಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English