ಮಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪ್ರಧಾನ ಮಂತ್ರಿಯಾಗೋದು ನನ್ನ ಗುರಿ. ಪ್ರಧಾನಿ ನರೇಂದ್ರ ಮೋದಿ ನನ್ನ ಪ್ರತಿಸ್ಪರ್ಧಿ ಎಂದು ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ.
ಅವರು ಇಂದು ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮತ ಹಾಕುವಂತೆ ಮನೆ ಮನೆಗೆ ಭೇಟಿ ನೀಡಿ ಪ್ರಚಾರ ಮಾಡಲ್ಲ, ಡ್ರಿಂಕ್ಸ್, ಸೀರೆ ಹಂಚಲ್ಲ ಎಂದರು.
ನಾನು ಸ್ಪರ್ಧಿಸುತ್ತಿರುವ ಕ್ಷೇತ್ರದ ಜನತೆಯ ಕಷ್ಟ ಅರಿತುಕೊಂಡು ಏನು ಮಾಡಬೇಕಾಗಿತ್ತು. ಏನು ಮಾಡಬಹುದು ಎಂದು ತಿಳಿದುಕೊಂಡು ನಾನು ಕೆಲಸ ಮಾಡಲಿದ್ದೇನೆ. ಶಾಸಕನಾದರೆ ವೇತನ ಸಿಗುತ್ತೆ. ಅದು ಜನರ ದುಡ್ಡು. ಆ ವೇತನಕ್ಕೆ ತಕ್ಕುದಾದ ರೀತಿಯಲ್ಲಿ ನಾನು ಕೆಲಸ ಮಾಡಬೇಕೇ ಹೊರತು ಯಾರಿಗೂ ಸಲಾಮು ಹೊಡಿಯಬೇಕಾಗಿಲ್ಲ. ನಾನು ಸಿನೆಮಾ ರಂಗದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಅಲ್ಲಿ ಯಾರಿಗೂ ಕೈ ಮುಗಿದಿಲ್ಲ. ಅದೇ ರೀತಿಯಲ್ಲಿ ರಾಜಕೀಯದಲ್ಲೂ ಮಾಡುತ್ತೇನೆ ಎಂದರು.
ಇಲ್ಲಿ ನಾನು ಸೋತರೆ ಏನೂ ಬೇಜಾರಿಲ್ಲ. ಆದರೆ ನನ್ನ ಸೋಲು ಜನರ ಸೋಲು. ಇಲ್ಲಿ ಸೋತರೂ ಎಂಪಿ ಚುನಾವಣೆಗೆ ನಿಲ್ಲುತ್ತೇನೆ. ಪ್ರಧಾನಿಯಾಗುತ್ತೇನೆ ಎಂದು ಅವರು ಹೇಳಿದರು.
ಕರಾವಳಿಯ ಮೀನುಗಾರರು ಬಹಳಷ್ಟು ಸಮಸ್ಯೆಯಲ್ಲಿದ್ದಾರೆ. ಮೀನು ತಿನ್ನುವ ಒಂದು ವರ್ಗಕ್ಕಾಗಿ ಮೀನುಗಾರರು ತಮ್ಮ ಪ್ರಾಣವನ್ನು ಒತ್ತೆ ಇಡುವಂತಾಗಿದೆ. ಮೀನುಗಾರರು ತಮ್ಮ ವೃತ್ತಿ ತೊರೆದು ಕೃಷಿ ಮಾಡಿ ಎಂದು ಅವರು ಸಲಹೆ ನೀಡಿದರು. ಬರೀ ರಾಜಕೀಯ ವ್ಯಕ್ತಿಗಳು ಮಾತ್ರ ಬದಲಾಗೋದಲ್ಲ ಮತದಾರರು ಬದಲಾವಣೆಯಾಗಬೇಕು. ಹಣ ಹಂಚುವ ಕೆಲಸ ನಡೆಯುತ್ತಿದೆ. ಕೆಲವರು ತೆಗೆದುಕೊಂಡು ಮತ ಮಾರಾಟ ಮಾಡುತ್ತಿದ್ದಾರೆ. ಆದರೆ ನಾನು ಒಂದು ಗ್ಲಾಸ್ ನೀರನ್ನು ಕೂಡ ಚುನಾವಣೆಗಾಗಿ ನೀಡಲ್ಲ. ನೀರು ಎಲ್ಲರಿಗೂ ಮನೆಗೆ ಬರುತ್ತದೆ. ಹಾಗಿರುವಾಗ ನಾನು ಕೊಡೊದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ಎರಡು ದಿನಗಳಲ್ಲಿ ಚಿಹ್ನೆಯ ಕುರಿತು ನಿರ್ಧಾರವಾಗಲಿದೆ. ಹುಚ್ಚ ವೆಂಕಟ್ ಪಕ್ಷ ಕಟ್ಟಬೇಕು ಅಂದುಕೊಂಡಿದ್ದೆ. ಆದರೆ ಅದು ಸದ್ಯ ಸಾಧ್ಯವಾಗಿಲ್ಲ. ಯಾವುದೇ ಪಕ್ಷಕ್ಕೂ ಹೋಗಲ್ಲ. ಆ ಪಕ್ಷದವರು ಬೇಡದ ಕೆಲಸ ಮಾಡಿದ್ರೆ ನನ್ನ ಹೆಸರು ಹಾಳಾಗುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
Click this button or press Ctrl+G to toggle between Kannada and English