ಮಂಗಳೂರು: ಕೈರಂಗಳದಲ್ಲಿ ನಡೆದ ಪ್ರತಿಭಟನೆಯೊಂದರಲ್ಲಿ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬೂತ ಕಟ್ಟುವವರ ವಿರುದ್ಧ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕು ಎಂದು ಬೆಳ್ತಂಗಡಿಯ ನಲಿಕೆ ಸಮಾಜ ಸೇವಾ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಒತ್ತಾಯ ಮಾಡಿದ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ, ಚುನಾವಣಾ ನೀತಿ ಸಂಹಿತೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಪ್ರಭಾಕರ ಭಟ್ ಚುನಾವಣಾ ಆಯೋಗವನ್ನು ಕೂಡಾ ಕಪಿಮುಷ್ಟಿಯಲ್ಲಿರಿಸಲು ಪ್ರಯತ್ನಿಸಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್‌ನ ನಿಜ ಬಣ್ಣ ಬಯಲಾಗಿದೆ. ಪ್ರಭಾಕರ ಭಟ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಜೈಲಿಗಟ್ಟದಿದ್ದರೆ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದು ಎಚ್ಚರಿಸಿದರು.
ದೈವ ನರ್ತಕರಿಗೆ ತಲೆ ಸರಿ ಇಲ್ಲ ಎಂದು ಹೇಳುವ ಕಲ್ಲಡ್ಕ ಪ್ರಭಾಕರ ಭಟ್ ನಾಡಿನಾದ್ಯಂತ ಕೋಮು ಸಂಘರ್ಷಗಳಿಗೆ ಕಾರಣವಾಗಿ ಕ್ರಿಮನಲ್ ಪ್ರಕರಣಗಳನ್ನು ದಾಖಲಿಸಿಕೊಂಡ ಅಪ್ಪಟ ಕ್ರಿಮಿನಲ್. ಅಂತಹವರಿಗೆ ದೈವ ನರ್ತಕರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ. ದೈವ ನರ್ತನ ಸಂದರ್ಭದಲ್ಲಿ ಯಾರೇ ಬಂದರೂ ಭಕ್ತಿಯಿಂದ ಪ್ರಸಾದ ನೀಡುವುದು ತುಳುನಾಡಿನ ಸಂಪ್ರದಾಯ. ಭಟ್ಟರಂತಹ ಕೋಮುವಾದಿ ಶಕ್ತಿಗಳು ಇಂತಹ ವಿಚಾರದಲ್ಲಿ ರಾಜಕೀಯ ಮಾಡುವ ಮೂಲಕ ತಾನೊಬ್ಬ ನಕಲಿ ಹಿಂದುತ್ವವಾದಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಬೂತಾರಾಧನೆಯ ಸಂದರ್ಭ ಬೂಳ್ಯ, ಪ್ರಸಾದ ಕೊಡುವುದು ದೈವವೇ ಎಂದು ನಂಬಿಕೊಂಡು ಬಂದ ಸಂಪ್ರದಾಯ, ನಂಬಿಕೆಯನ್ನು ಅವಮಾನಿಸಲಾಗಿದ್ದು, ಇದನ್ನು ಸಹಿಸಲಾಗದು. ಹಿಂದೂ ಧರ್ಮದ ಪ್ರತಿಪಾದಕ ಎಂದು ಹೇಳುವವರು ಅದೇ ಹಿಂದೂ ಧರ್ಮದ ಭಾಗವಾಗಿರುವ ದೈವ ನರ್ತನವನ್ನು ಬಹಿರಂಗವಾಗಿ ಅವಹೇಳನ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ದೈವಸ್ಥಾನ, ದೇವಸ್ಥಾನಗಳಿಗೆ ಸಚಿವ ಯು.ಟಿ.ಖಾದರ್ ಬಂದಿದ್ದರೆ ಅಂತಹ ದೈವಸ್ಥಾನ, ದೇವಸ್ಥಾನಗಳಿಗೆ ಮತ್ತೊಮ್ಮೆ ಬ್ರಹ್ಮಕಲಶಕ್ಕೆ ಕರೆಕೊಡುವ ಪ್ರಭಾಕರ ಭಟ್ ತನ್ನ ನೇತೃತ್ವದ ಕಲ್ಲಡ್ಕದ ಶ್ರೀರಾಮ ಮಂದಿರಕ್ಕೂ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಹೋಗಿದ್ದಾರೆ. ಮೊದಲು ಆ ಮಂದಿರಕ್ಕೆ ಬ್ರಹ್ಮಕಲಶ ಮಾಡಲಿ ಎಂದು ಅವರು ಸವಾಲೆಸೆದರು.
ಕಲ್ಲಡ್ಕ ಪ್ರಭಾಕರ ಭಟ್ ಶ್ರೀರಾಮ ಮಂದಿರಕ್ಕೆ ಮುಸ್ಲಿಮರಿಂದ ಬಂದಿರುವ ಹಣವನ್ನು ವಾಪಾಸು ನೀಡಲು ಸಿದ್ಧರಿದ್ದಾರೆಯೇ? ಎಂದು ಎಸ್. ಪ್ರಭಾಕರ್ ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಸುಂದರ್ ಬೆಳ್ತಂಗಡಿ, ಯುವ ವೇದಿಕೆ ಅಧ್ಯಕ್ಷ ಹರೀಶ್ ನಾವೂರು, ರಾಮು ಶಿಶಿಲ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English