ಬೆಂಗಳೂರು: ಜಿದ್ದಾಜಿದ್ದಿಯ ಅಖಾಡವಾಗಿರುವ ಚನ್ನಪಟ್ಟಣ ಕ್ಷೇತ್ರದಿಂದ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹೆಚ್.ಎಂ.ರೇವಣ್ಣ ಅವರು ಈ ಬಾರಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುವ ಮೂಲಕ ಸಿ.ಪಿ.ಯೋಗೇಶ್ವರ್‌ಗೆ ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ. ಚನ್ನಪಟ್ಟಣದಲ್ಲಿ ರೇವಣ್ಣ ಅವರನ್ನು ನಿಲ್ಲಿಸಲು ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಸಹೋದರರು ಸಮ್ಮತಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್‍ನಲ್ಲೇ ಇದ್ದು, ಪಕ್ಷಾಂತರವಾಗಿ ಕಾಂಗ್ರೆಸ್ ವಿರುದ್ಧವೇ ಹರಿಹಾಯ್ದಿದ್ದ ಸಿ.ಪಿ.ಯೋಗೇಶ್ವರ್ ಅವರನ್ನು ಮಣಿಸಲು ಕಾಂಗ್ರೆಸ್ ಎಲ್ಲಾ ರೀತಿಯಲ್ಲಿ ತಂತ್ರ ಹೆಣೆದಿದ್ದು, ಅದರಂತೆ ಪ್ರಬಲ ಪೈಪೋಟಿ ನೀಡಲು ಕಾಂಗ್ರೆಸ್ ಲೆಕ್ಕಾಚಾರ ಹಾಕಿದೆ.
ಚನ್ನಪಟ್ಟಣದಲ್ಲೇ ಜೆಡಿಎಸ್‍ನಿಂದ ಹೆಚ್.ಡಿ.ಕುಮಾರಸ್ವಾಮಿ ಸಹ ಸ್ಪರ್ಧಿಸುವ ಸಾಧ್ಯತೆ ಇದ್ದು, ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಿ ರೇವಣ್ಣ ಸೂಕ್ತ ಅಭ್ಯರ್ಥಿ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ಘಟಾನುಘಟಿಗಳ ಸ್ಪರ್ಧೆಯಿಂದ ದೊಡ್ಡ ಸ್ಪರ್ಧೆಯೇ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇಂದು ಬೆಳಗ್ಗೆ ಹೆಚ್.ಎಂ.ರೇವಣ್ಣ ಅವರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಸಿ.ಪಿ.ಯೋಗೇಶ್ವರ್ ಅವರನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ರೇವಣ್ಣ ಅವರನ್ನು ಸ್ಪರ್ಧೆಗೆ ಇಳಿಸುವ ಮೂಲಕ ತಂತ್ರ ಹೆಣೆದಿದ್ದಾರೆ ಎಂದೇ ಹೇಳಲಾಗುತ್ತಿದೆ.
ಸಿಎಂ ನಿವಾಸದ ಎದುರು ಆಕಾಂಕ್ಷಿಗಳ ದಂಡು: ಕಾಂಗ್ರೆಸ್‍ನಿಂದ ಟಿಕೆಟ್ ಪಡೆಯಲು ವಿವಿಧ ಕ್ಷೇತ್ರಗಳ ಆಕಾಂಕ್ಷಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಲು ಅವರ ಮನೆ ಮುಂದೆ ಅಪಾರ ಸಂಖ್ಯೆಯ ಬೆಂಬಲಿಗರು ಜಮಾಯಿಸಿದ್ದರು.
ಸಚಿವ ಟಿ.ಬಿ.ಜಯಚಂದ್ರ ತಮ್ಮ ಮಗನಿಗೆ ಚಿಕ್ಕನಾಯಕನಹಳ್ಳಿಯಿಂದ ಟಿಕೆಟ್ ನೀಡುವಂತೆ ಕೋರಲು ಆಗಮಿಸಿದ್ದರೆ, ತರೀಕೆರೆಯ ಶ್ರೀನಿವಾಸ್, ಅರಸೀಕೆರೆ ಶ್ರೀನಿವಾಸ್, ಮಾಜಿ ಮೇಯರ್ ಪದ್ಮಾವತಿ ಸೇರಿದಂತೆ ಇನ್ನಿತರ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ಭೇಟಿಗೆ ಬಂದು ಟಿಕೆಟ್‍ಗಾಗಿ ಮನವಿ ಮಾಡಿದರು. ಇದರೊಂದಿಗೆ ಶಾಸಕ ಹ್ಯಾರೀಸ್‍ಗೆ ಟಿಕೆಟ್ ತಪ್ಪಿಸದಂತೆ ಆಗ್ರಹಿಸಲು ಅಪಾರ ಬೆಂಬಲಿಗರು ಬಂದು ಸೇರಿದ್ದರು.
Click this button or press Ctrl+G to toggle between Kannada and English