ಮಂಗಳೂರು: ಮೀನುಗಾರಿಕಾ ಮಹಾವಿದ್ಯಾಲಯದ ಮೀನುಗಾರಿಕೆ ಸಂಪನ್ಮೂಲ ಹಾಗೂ ನಿರ್ವಹಣೆ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾದ ಡಾ. ಎಸ್.ಎಂ. ಶಿವಪ್ರಕಾಶ್ ಇವರು ತಮಿಳುನಾಡು ಮೀನುಗಾರಿಕಾ ವಿಶ್ವವಿದ್ಯಾಲಯದ ಯೋಜನಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ತಮಿಳುನಾಡು ಮೀನುಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಫೆಲಿಕ್ಸ್ ಅವರು ಡಾ. ಎಸ್.ಎಂ. ಶಿವಪ್ರಕಾಶ್ ಅವರನ್ನು 3 ವರ್ಷಗಳ ಅವಧಿಗೆ (2018-2020) ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ನೂತನವಾಗಿ ಆರಂಭಗೊಂಡಿರುವ ತಮಿಳುನಾಡು ಮೀನುಗಾರಿಕಾ ವಿಶ್ವವಿದ್ಯಾಲಯದ ಆರ್ಥಿಕ ಯೋಜನೆಗಳು ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದ ಸಾಧನೆ ಹಾಗೂ ವಿಶ್ವವಿದ್ಯಾಲಯದ ನೀಲನಕ್ಷೆ ಕುರಿತು ಪರಿಶೀಲಿಸಿ ವಿಶ್ವವಿದ್ಯಾಲಯಕ್ಕೆ ಮಾರ್ಗದರ್ಶನ ನೀಡುವಂತೆ ಆದೇಶಿಸಲಾಗಿದೆ.
ಡಾ. ಎಸ್. ಎಂ. ಶಿವಪ್ರಕಾಶ್ ಅವರು ಈ ಮೊದಲು ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್‌ನಲ್ಲಿ ವಿಸ್ತರಣಾ ನಿರ್ದೇಶಕರಾಗಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿ, ಸದ್ಯ ಮಂಗಳೂರು ಮೀನುಗಾರಿಕೆ ಮಹಾ ವಿದ್ಯಾಲಯಕ್ಕೆ ಮರಳಿದ್ದಾರೆ.
35 ವರ್ಷಗಳ ಶಿಕ್ಷಕ ವೃತ್ತಿಯ ಅನುಭವ ಹೊಂದಿರುವ ಇವರಿಗೆ ತಮ್ಮ ಸಂಶೋಧನಾ ಪ್ರಬಂಧಕ್ಕೆ ಭಾರತೀಯ ಇಕ್ತಿಯೋಲಜಿ ಆಕಾಡಮಿಯಿಂದ 1986 ರಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಇಂಟರ್‌ಲ್ಯಾಬ್ ಅಂಬಾಲ ಚಿನ್ನದ ಪದಕ ಗಳಿಸಿರುತ್ತಾರೆ. ನಾರ್ವೆ (1987-88), ಇಂಗ್ಲೆಂಡ್ (1991) ಹಾಗೂ ಕೆನಡಾ (1995)ದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿದ ಅನುಭವ ಇವರದಾಗಿರುತ್ತದೆ.
Click this button or press Ctrl+G to toggle between Kannada and English