ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದ್ದು, ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿವೆ. ಈ ನಡುವೆ ಬಿಜೆಪಿ ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ಭದ್ರಕೋಟೆಯಂತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಮಾರ್ಪಟ್ಟಿತ್ತು. ಮೊದಲ ಪಟ್ಟಿಯಲ್ಲಿ ದಕ್ಷಿಣಕನ್ನಡದ ಕೇವಲ ಒಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾತ್ರ ಘೋಷಿಸಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಎಸ್. ಅಂಗಾರ ಮತ್ತೆ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಉಳಿದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಚಾರ ಗೊಂದಲದ ಗೂಡಾಗಿತ್ತು. ಅಲ್ಲದೇ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಕ್ಯೂ ಇತ್ತು. ಈಗ ದಕ್ಷಿಣ ಕನ್ನಡದ ಉಳಿದ ಏಳು ವಿಧಾನಸಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಶತಾಯಗತಾಯವಾಗಿ ಕರಾವಳಿಯ ಎಲ್ಲಾ ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹಟ ತೊಟ್ಟಿರುವ ಬಿಜೆಪಿ ವರಿಷ್ಠ ಅಮಿತ್ ಷಾ, ದಕ್ಷಿಣಕನ್ನಡದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ತಮ್ಮದೇ ತಂಡದ ಮೂಲಕ ಸರ್ವೆ ನಡೆಸಿದ್ದರು.
ಈ ತಂಡದ ಸರ್ವೆ ಫಲಿತಾಂಶ ಜೊತೆಗೆ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವತಿಯಿಂದಲೂ ಅಭ್ಯರ್ಥಿಗಳ ಪಟ್ಟಿ ವರಿಷ್ಠರು ತರಿಸಿಕೊಂಡಿದ್ದರು. ಅಲ್ಲದೇ ಈ ಬಾರಿ ಜಾತಿ ಲೆಕ್ಕಾಚಾರವೂ ಪಕ್ಷದ ಅಭ್ಯರ್ಥಿ ಆರಿಸುವ ನಿಟ್ಟಿನಲ್ಲಿ ಗಣನೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಬಾರಿ ಅಮಿತ್ ಶಾ ಸರ್ವೆಯಲ್ಲಿ ಹೆಚ್ಚಿನ ಜನಮತ ಗಳಿಸಿದ ಅಭ್ಯರ್ಥಿಗಳನ್ನು ಕೈ ಬಿಟ್ಟು, ಜಾತಿ ಆಧಾರದಲ್ಲಿ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಈ ನಡುವೆ ದಕ್ಷಿಣಕನ್ನಡದ ಉಳಿದ ಏಳು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ ಎಂದು ಹೇಳಲಾಗಿದ್ದು, ಬಿಜೆಪಿ ವರಿಷ್ಠರ ಕೈಯಲ್ಲಿ ಈ ಏಳು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ ಎಂದು ಹೇಳಲಾಗಿದೆ.
ಈ ಪಟ್ಟಿಯ ಪ್ರಕಾರ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂತೋಷ್ ಕುಮಾರ್ ರೈ ಬೊಳಿಯಾರ್, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕೃಷ್ಣ ಜೆ. ಪಾಲೇಮಾರ್ , ಮುಲ್ಕಿ-ಮೂಡಬಿದ್ರೆ ಕ್ಷೇತ್ರಕ್ಕೆ ಉಮಾನಾಥ್ ಕೋಟ್ಯಾನ್, ಪುತ್ತೂರು ಕ್ಷೇತ್ರಕ್ಕೆ ಸಂಜೀವ ಮಠಂದೂರು, ಬಂಟ್ವಾಳ ಕೇತ್ರಕ್ಕೆ ರಾಜೇಶ್ ನಾಯಕ್ ಹಾಗೂ ಬೆಳ್ತಂಗಡಿ ಕ್ಷೇತ್ರಕ್ಕೆ ಯುವ ನ್ಯಾಯವಾದಿ ಹರೀಶ್ ಪೂಂಜಾ ರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಬಾರಿ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಸುಳ್ಯ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದ್ದ ಕಾರಣ ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಈ ಬಾರಿ ಗೆಲ್ಲಲೇ ಬೇಕೆನ್ನುವ ಹಠದಲ್ಲಿರುವ ಬಿಜೆಪಿಗೆ ಈ ಬಾರಿ ಆಕಾಂಕ್ಷಿಗಳೇ ಮಗ್ಗಲು ಮುಳ್ಳಾಗುವ ಸಾಧ್ಯತೆಯೂ ಹೆಚ್ಚಾಗಿದೆ.
Click this button or press Ctrl+G to toggle between Kannada and English