ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಮು ದ್ವೇಷದ ರಾಜಕಾರಣದೊಂದಿಗೆ ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದ್ದು, ಮತ ಸೆಳೆಯುವ ಪ್ರಯತ್ನವನ್ನು ನಾಯಕರು ಮಾಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ದ್ವೇಷದ ರಾಜಕಾರಣ ಇಲ್ಲದೇ ರಾಜಕಾರಣ ನಡೆಯುವುದಿಲ್ಲವೇನೋ ಎಂಬ ಪರಿಸ್ಥಿತಿ ಇದೆ. ಇದು ಪ್ರತಿ ಚುನಾವಣೆಯಲ್ಲೂ ಸಾಮಾನ್ಯವಾಗಿದ್ದು, ಆದ್ದರಿಂದ ಈ ಚುನಾವಣೆಯಲ್ಲೂ ಅದು ಮುಂದುವರಿದಿದೆ.
ಬಿಜೆಪಿಯ ಪ್ರಬಲ ಕೋಟೆ ಎಂದೇ ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 8 ವಿಧಾನಸಭಾ ಕ್ಷೇತ್ರದಲ್ಲಿ ಕೇವಲ ಒಂದು ಸ್ಥಾನವನ್ನು ಪಡೆಯುವ ಮೂಲಕ ಕಳಪೆ ಪ್ರದರ್ಶನ ತೋರಿತ್ತು. ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಮಾತ್ರ ಉಳಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗಿತ್ತು. ಉಳಿದ ಕ್ಷೇತ್ರಗಳಾದ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ , ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿತ್ತು.
ಆ ನಂತರದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಬೆಂಬಲ ಗಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಮತದಾರ ಯಾರಿಗೆ ಜೈ ಅನ್ನುತ್ತಾನೆ ಎಂಬ ಕುತೂಹಲ ಮೂಡಿಸಿದೆ.
ಜಿಲ್ಲೆಯಲ್ಲಿ ಎಂಟು ಕ್ಷೇತ್ರಗಳಿದ್ದು ಅದರಲ್ಲಿ ನಾಲ್ಕು ಕ್ಷೇತ್ರಗಳು ಮಂಗಳೂರು ತಾಲೂಕಿನಲ್ಲಿ ಇದೆ. ಮಂಗಳೂರು , ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತು ಮೂಡಬಿದ್ರೆ ಕ್ಷೇತ್ರ. ಇನ್ನು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗೊಂದರಂತೆ ಕ್ಷೇತ್ರಗಳಿದೆ.
ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನ ಮೊಯ್ದಿನ್ ಬಾವ, ಮಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್‌ನ ಜೆ.ಆರ್. ಲೋಬೋ, ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್, ಮೂಡಬಿದ್ರೆಯಲ್ಲಿ ಕಾಂಗ್ರೆಸ್‌ನ ಅಭಯಚಂದ್ರ ಜೈನ್, ಬಂಟ್ವಾಳದಲ್ಲಿ ಕಾಂಗ್ರೆಸ್‌ನ ಬಿ.ರಮಾನಾಥ ರೈ, ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿ, ಬೆಳ್ತಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಸಂತ ಬಂಗೇರ ಮತ್ತು ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಅಂಗಾರ ಅವರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಕೋಮು ದ್ವೇಷದ ರಾಜಕಾರಣದ ನಡುವೆ ಜಿಲ್ಲೆಯಲ್ಲಿ ಟಿಕೆಟ್ ಪಡೆಯಲು ನಾಯಕರು ಹರಸಾಹಸಪಡುತ್ತಿದ್ದು, ಆಯಾ ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ
ಕಳೆದ ಚುನಾವಣೆಯಲ್ಲಿ 8 ಕ್ಷೇತ್ರಗಳಲ್ಲಿ 7 ಕ್ಷೇತ್ರಗಳನ್ನು ಸೋತ ಬಿಜೆಪಿಗೆ ಭಾರಿ ಮುಖಭಂಗವಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಬರಲ್ಲ ಎಂಬುದು ಬಿಜೆಪಿ ನಂಬುಗೆ. ಜಿಲ್ಲೆಯಲ್ಲಿ ಎರಡು ಪಕ್ಷಗಳೇ ಪ್ರಬಲವಾಗಿದ್ದರೂ ಇಲ್ಲಿ ಸ್ಪರ್ಧಿಸುವ ಇತರ ಪಕ್ಷ ಅಥವಾ ಅಭ್ಯರ್ಥಿಗಳು ಎರಡು ಪಕ್ಷಗಳ ಸೋಲು ಗೆಲುವಿನಲ್ಲಿ ಪಾತ್ರ ವಹಿಸುವುದು ವಿಶೇಷ.
ಉದಾಹರಣೆಗೆ ಎಸ್‌ಡಿಪಿಐನ ಅಭ್ಯರ್ಥಿಗಳು ಸ್ಪರ್ಧಿಸಿದರೆ ಕಾಂಗ್ರೆಸ್ ಗೆಲುವಿಗೆ ತೊಡಕಾಗುತ್ತದೆ. ಶ್ರೀರಾಮಸೇನೆ ಅಥವಾ ಹಿಂದೂಪರ ಪಕ್ಷಗಳು ಸ್ಪರ್ಧಿಸಿದರೆ ಬಿಜೆಪಿಯ ಗೆಲುವಿಗೆ ಅಡ್ಡಿಯಾಗಬಹುದು.
ಭಿನ್ನರೀತಿಯಲ್ಲಿ ಜಾತಿವಾರು ರಾಜಕೀಯ: ಜಿಲ್ಲೆಯಲ್ಲಿ ಜಾತಿವಾರು ರಾಜಕೀಯ ಇದೆಯಾದರೂ ರಾಜ್ಯದ ಇತರೆ ಭಾಗಗಳಲ್ಲಿ ಇರುವ ಜಾತಿವಾರು ರಾಜಕೀಯಕ್ಕಿಂತ ಭಿನ್ನ ರೀತಿಯ ಜಾತಿವಾರು ರಾಜಕೀಯ ಇಲ್ಲಿ ನಡೆಯುತ್ತದೆ. ರಾಜ್ಯದ ಹಲವೆಡೆ ಒಕ್ಕಲಿಗ, ಲಿಂಗಾಯತ , ಅಹಿಂದ ರಾಜಕಾರಣವಿದ್ದರೆ ಇಲ್ಲಿ ಬಿಲ್ಲವ, ಬಂಟ ಸಮುದಾಯದ ಪ್ರತಿಷ್ಠೆಯೊಂದಿಗೆ ನಡೆಯುತ್ತದೆ.
ಈ ಎರಡು ಸಮುದಾಯಗಳು ಒಂದೊಂದು ಪ್ರಮುಖ ಪಕ್ಷದ ಪರವಾಗಿವೆ ಎಂಬ ಲೆಕ್ಕಾಚಾರ ಕೂಡ ಹಾಕಿಕೊಳ್ಳಲಾಗಿದೆ. ಆದರೆ ಅದು ತಲೆಕೆಳಗಾಗಿ ಉದಾಹರಣೆಗಳು ಕೂಡ ಈ ಹಿಂದೆ ನಡೆದಿವೆ.
ಮಂಗಳೂರು ಉತ್ತರ: ಈ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮೊಯ್ದಿನ್ ಬಾವ ಹಾಲಿ ಶಾಸಕ. ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿ ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಆಯ್ಕೆಯಾಗಿದ್ದರು.
ಕಳೆದ ಬಾರಿ ಚುನಾವಣೆಯಲ್ಲಿ ಸೋತ ಕೃಷ್ಣ ಜೆ ಪಾಲೇಮಾರ್ ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಬಿಜೆಪಿಯಿಂದ ಹಿಂದೂ ಸಂಘಟನೆ ಮುಖಂಡ ಸತ್ಯಜಿತ್ ಸುರತ್ಕಲ್ ಮತ್ತು ಡಾ. ವೈ ಭರತ್ ಶೆಟ್ಟಿ ಕೂಡ ಆಕಾಂಕ್ಷಿಯಾಗಿದ್ದಾರೆ.
ಇನ್ನು ಕಾಂಗ್ರೆಸ್‌ನಿಂದ ಹಾಲಿ ಶಾಸಕ ಮೊಯ್ದಿನ್ ಬಾವಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದ್ದರೂ ಇತರರು ಕೈ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಈ ಕ್ಷೇತ್ರದಲ್ಲಿ ಸಿಪಿಎಂನಿಂದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇರುತ್ತದೆ
ಮಂಗಳೂರು ದಕ್ಷಿಣ: ಸದ್ಯ ಕಾಂಗ್ರೆಸ್ ಜೆ.ಆರ್.ಲೋಬೋ ಇಲ್ಲಿನ ಶಾಸಕ. ಈ ಕ್ಷೇತ್ರದಲ್ಲಿ ಕಳೆದ ಚುನವಣೆಗೂ ಮುನ್ನ ಸುಮಾರು 20 ವರ್ಷ ಬಿಜೆಪಿ ಪ್ರಾಬಲ್ಯ ಹೊಂದಿತ್ತು. ಕಮಲದಿಂದ ಯೋಗೀಶ್ ಭಟ್ ನಿರಂತರವಾಗಿ ಗೆಲುವು ಸಾಧಿಸಿದ್ದರು. ಆದ್ರೆ 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಅವರು ಬಿಜೆಪಿಗೆ ಶಾಕ್ ನೀಡಿದ್ದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಜೆ.ಆರ್.ಲೋಬೋ, ಬಿಜೆಪಿಯಿಂದ ವೇದವ್ಯಾಸ ಕಾಮತ್, ಬದ್ರಿನಾಥ್ ಕಾಮತ್, ಎಂ.ಬಿ.ಪುರಾಣಿಕ್, ಗಣೇಶ್ ರಾವ್ ಕಣಕ್ಕೆ ಇಳಿಯಲು ಪೈಪೋಟಿ ನಡೆಸುತ್ತಿದ್ದಾರೆ.
ಮಂಗಳೂರು: ಮಂಗಳೂರು ಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಕಾಂಗ್ರೆಸ್. ಕಾಂಗ್ರೆಸ್ ಸಚಿವ ಯು.ಟಿ.ಖಾದರ್ ಇಲ್ಲಿನ ಶಾಸಕರು. ಈ ಬಾರಿಯೂ ಇವರೇ ಇಲ್ಲಿಂದ ಸ್ಪರ್ಧಿಸುವುದು ಬಹುತೇಕ ಖಚಿತ.
ಅಲ್ಪಸಂಖ್ಯಾತ ಮತಗಳು ಇಲ್ಲಿ ಹೆಚ್ಚಿರುವುದರಿಂದ ಅಭ್ಯರ್ಥಿಗಳ ಗೆಲುವಿಗೆ ನಿರ್ಣಾಯಕವಾಗಿವೆ. ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಚಂದ್ರಹಾಸ ಉಚ್ಚಿಲ್, ರಹೀಂ ಉಚ್ಚಿಲ್, ಸತ್ಯಜಿತ್ ಸುರತ್ಕಲ್ ಆಕಾಂಕ್ಷಿಯಾಗಿದ್ದಾರೆ. ಇನ್ನು ಸಿಪಿಎಂನಿಂದ ಯುವ ವಕೀಲ ನಿತೀನ್ ಕುತ್ತಾರ್ ಸ್ಪರ್ಧಿಸಲಿದ್ದು, ಜೆಡಿಎಸ್‌ನಿಂದ ಮಂಗಳೂರು ಮಾಜಿ ಮೇಯರ್, ಇತ್ತೀಚೆಗಷ್ಟೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿಸುವ ಅಶ್ರಫ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಮೂಡಬಿದ್ರೆ ಕ್ಷೇತ್ರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಕೈ ಮೇಲುಗೈ ಪಡೆದು ಮಾಜಿ ಸಚಿವ ಅಭಯಚಂದ್ರ ಜೈನ್ ಗೆಲುವು ಸಾಧಿಸಿದ್ದರು. ಈ ಬಾರಿ ತಾವು ಸ್ಪರ್ಧಿಸುವುದಿಲ್ಲ ಎಂದು ಒಂದೊಮ್ಮೆ ನೀಡಿದ ಹೇಳಿಕೆಯಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವು ಕಾಂಗ್ರೆಸ್ ಮುಖಂಡರು ಆಕಾಂಕ್ಷಿಯಾಗಿದ್ದಾರೆ. ಅಭಯಚಂದ್ರ ಜೈನ್ ಅವರು ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರಿಗೆ ಟಿಕೆಟ್ ನೀಡಲು ತಾನು ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದರು. ಆದರೆ ಬಳಿಕ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವರು ಲಾಬಿ ಮಾಡುತ್ತಿರುವುದರಿಂದ ಇದೀಗ ತಾನೇ ಮತ್ತೊಮ್ಮೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಮಿಥುನ್ ರೈ, ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್, ಮಹಿಳಾ ಕಾಂಗ್ರೆಸ್ ಅದ್ಯಕ್ಷ ಶಾಲೆಟ್ ಪಿಂಟೋ ಕೈ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಿಂದ ಈ ಹಿಂದೆ ಸ್ಪರ್ಧಿಸಿದ್ದ ಉಮಾನಾಥ ಕೋಟ್ಯಾನ್ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಜೆಡಿಎಸ್‌ನಿಂದ ಸೌಂದರ್ಯ ರಮೇಶ್ ಎಂಬುವರ ಹೆಸರು ಕೇಳಿಬರುತ್ತಿದ್ದು, ಸಿಪಿಎಂನಿಂದ ಯಾದವ್ ಶೆಟ್ಟಿ ಸ್ಪರ್ಧಿಸುತ್ತಿದ್ದಾರೆ.
ಬಂಟ್ವಾಳ ಕ್ಷೇತ್ರ: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಚಿವ ಬಿ ರಮಾನಾಥ ರೈ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಈ ಸಲವೂ ಅವರಿಗೇ ಟಿಕೆಟ್ ಸಿಗುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬೇರೆ ಯಾರೂ ಆಕಾಂಕ್ಷಿಗಳಿಲ್ಲ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿದ್ದ ರಾಜೇಶ್ ನಾಯಕ್, ಗುರುಪುರ ಮಠದ ಸ್ವಾಮೀಜಿ ರಾಜಶೇಖರಾನಂದ ಸ್ವಾಮೀಜಿ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಎಸ್‌ಡಿಪಿಐನಿಂದ ರಿಯಾಝ್ ಫರಂಗಿಪೇಟೆ ಸ್ಪರ್ಧಿಸಲಿದ್ದಾರೆ. ಜೆಡಿಎಸ್ ಅಭ್ಯರ್ಥಿಯನ್ನು ಇನ್ನು ಅಂತಿಮಗೊಳಿಸಿಲ್ಲ.
ಬೆಳ್ತಂಗಡಿ ಕ್ಷೇತ್ರ: ಸದ್ಯ ಕಾಂಗ್ರೆಸ್‌ನ ವಸಂತ ಬಂಗೇರ ಇಲ್ಲಿನ ಶಾಸಕರಾಗಿದ್ದು, ಈ ಚುನಾವಣೆಯಲ್ಲೂ ಅವರೇ ಕಣಕ್ಕೆ ಇಳಿಯುವುದು ಬಹುತೇಕ ಖಚಿತ. ಬಿಜೆಪಿಯಿಂದ ಹರೀಶ್ ಪೂಂಜಾ, ಕಳೆದ ಸಲ ಸೋತ ರಂಜನ್ ಗೌಡ, ಪ್ರಭಾಕರ್ ಬಂಗೇರ, ಪ್ರತಾಪ್ ಸಿಂಹ ನಾಯಕ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಪುತ್ತೂರು: ಕಾಂಗ್ರೆಸ್‌ನ ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತೊಮ್ಮೆ ಸ್ಪರ್ಧಿಸುವ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಕಾಂಗ್ರೆಸ್‌ನ ಹೇಮನಾಥ ಶೆಟ್ಟಿ ಕೂಡ ಈ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿ. ಇನ್ನು ಬಿಜೆಪಿಯಲ್ಲಿ ಅಶೋಕ್ ಕುಮಾರ್ ಶೆಟ್ಟಿ, ಅರುಣ್ ಪುತ್ತಿಲ, ಸಂಜೀವ ಮಠಂದೂರು ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಜೆಡಿಎಸ್‌ನಿಂದ ಎಂ.ಬಿ ಸದಾಶಿವ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಸುಳ್ಯ ಕ್ಷೇತ್ರ: ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಇರುವ ಈ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಮೇಲುಗೈ ಸಾಧಿಸಿ ಅಂಗಾರ ಶಾಸಕರಾಗಿದ್ದರು. ಈ ಬಾರಿಯೂ ಅಂಗಾರ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕಳೆದ ಬಾರಿ ಸೋಲು ಕಂಡ ಡಾ.ರಘು ಈ ಬಾರಿಯೂ ಆಕಾಂಕ್ಷಿ. ಜೆಡಿಎಸ್, ಬಿಎಸ್‌ಪಿ ಮೈತ್ರಿ ಹಿನ್ನೆಲೆಯಲ್ಲಿ ಇಲ್ಲಿಂದ ಬಿಎಸ್‌ಪಿ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಜಿಲ್ಲಾ ವಕ್ತಾರ ಜಿತೇಂದ್ರ ಕೊಟ್ಟಾರಿ ಅವರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕಳೆದ ಬಾರಿಯ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಿ ಯಶಸ್ವಿಯಾಗಿದೆ. ಬಿಜೆಪಿಗೆ ಜನ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಮಹಾಬಲ ಮಾರ್ಲ ತಿಳಿಸಿದ್ದಾರೆ.
Click this button or press Ctrl+G to toggle between Kannada and English