ಶಿವಮೊಗ್ಗ: ಬಹುನಿರೀಕ್ಷಿತ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾಗಿದ್ದು, ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆಪ್ತರಿಗೆ ಟಿಕೆಟ್ ನೀಡಲಾಗಿದೆ.
ಕಳೆದ ಆರು ತಿಂಗಳುಗಳಿಂದ ಸಾಗರ ವಿಧಾನಸಭಾ ಕ್ಷೇತ್ರ ಸಾಕಷ್ಟು ಗೊಂದಲ ಗಲಾಟೆಗಳಿಗೆ ಸಾಕ್ಷಿಯಾಗಿತ್ತು. ಅತ್ಯಾಚಾರ ಪ್ರಕರಣದಲ್ಲಿ ಆರೋಪಮುಕ್ತರಾಗಿ ಬಂದ ಮಾಜಿ ಸಚಿವ ಹಾಲಪ್ಪ ಸಾಗರದಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದರು. ಇದರಿಂದ ಕಳೆದ ನಾಲ್ಕುವರೆ ವರ್ಷದಿಂದಲೂ ನಾನೇ ಅಭ್ಯರ್ಥಿ ಎಂದು ಪಕ್ಷ ಸಂಘಟನೆ ಮಾಡಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ರೊಚ್ಚಿಗೆದ್ದು ನೇರಾನೇರ ಆರೋಪಗಳನ್ನು ಮಾಡುತ್ತಿದ್ದರು.
ಇಬ್ಬರು ಬೆಂಬಲಿಗರ ಮಧ್ಯೆ ಸಾಗರಲ್ಲಿ ಫ್ಲೆಕ್ಸ್, ಬಟಿಂಗ್ಸ್‌ಗಳಿಗೂ ಜಗಳವಾಡುತ್ತಿದ್ದರು. ಇಷ್ಟೆಲ್ಲದರ ನಡುವೆ ಬಿಎಸ್‌ವೈ, ಹರತಾಳು ಹಾಲಪ್ಪಗೆ ಟಿಕೆಟ್ ಎಂದು ಘೋಷಣೆ ಮಾಡಿ ಸಾಕಷ್ಟು ಗೊಂದಲ ಸೃಷ್ಟಿ ಮಾಡಿದ್ದರು. ಈಗ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದ್ದು, ಹರತಾಳು ಹಾಲಪ್ಪಗೆ ಟಿಕೆಟ್ ನೀಡಲಾಗಿದೆ.
ಇನ್ನು ಸೊರಬದಲ್ಲಿ ಬಿಎಸ್‌ವೈ ಬಿಜೆಪಿಗೆ ಕರೆತಂದ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಗ್ರಾಮಾಂತರಕ್ಕೆ ಮಾಜಿ ಜಿಪಂ ಸದಸ್ಯನಾಗಿದ್ದ ಅಶೋಕ್ ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ನಾರಾಯಣಸ್ವಾಮಿಗೆ ನಿರಾಸೆ ಆಗಿದೆ.
ತೀರ್ಥಹಳ್ಳಿ ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ಆರಗ ಜ್ಞಾನೇಂದ್ರಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಮೊದಲ ಲಿಸ್ಟ್‌ನಲ್ಲಿ ಶಿಕಾರಿಪುರಕ್ಕೆ ಬಿಎಸ್ ಯಡಿಯೂರಪ್ಪ ಹಾಗೂ ಶಿವಮೊಗ್ಗ ನಗರಕ್ಕೆ ಕೆಎಸ್ ಈಶ್ವರಪ್ಪ ಹೆಸರು ಪ್ರಕಟವಾಗಿರುವುದರಿಂದ, ಭದ್ರಾವತಿ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಬಿಜೆಪಿ ಅಂತಿಮಗೊಳಿಸಿದಂತಾಗಿದೆ.
Click this button or press Ctrl+G to toggle between Kannada and English