ಮೈಸೂರು : ವೈಭವಯುತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಸುಮಾರು 750ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಬಲರಾಮ ಆನೆಗಳಾದ ಸರಳ ಹಾಗೂ ಮೇರಿ ಮತ್ತು ಅಶ್ವಪಡೆಯೊಂದಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಸ್ತುವಾರಿ ಸಚಿವ ರಾಮದಾಸ್, ಮೇಯರ್ ಪುಷ್ಪಲತಾ ಚಿಕ್ಕಣ್ಣರವರಿಗೆ ತಮ್ಮ ಸೊಂಡಿಲನೆತ್ತಿ ಗಣ್ಯರಿಗೆ ಗೌರವಸಲ್ಲಿಸಿದವು.
ಈ ಸಂದರ್ಭ ಕುಶಾಲತೋಪು ಸಿಡಿಸಲಾಯಿತು. ಬಳಿಕ ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಲ್ಲಿ ತೆರಳಿದ ಬಲರಾಮನಿಗೆ ಮಾರ್ಗದುದ್ದಕ್ಕೂ ಜನ ಭಕ್ತಿಯಿಂದ ನಮಿಸಿ ಗೌರವಿಸಿದರು. ಈ ಮೂಲಕ ಐತಿಹಾಸಿಕ 401ನೇ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಲಕ್ಷಾಂತರ ಮಂದಿ ಗುರುವಾರ ಸಾಕ್ಷಿಯಾದರು. ಈ ಒಂದು ಅಪರೂಪದ ಕ್ಷಣಗಳಿಗಾಗಿ ವರ್ಷದಿಂದ ಕಾಯುತ್ತಿದ್ದ ಮಂದಿ ಚಿನ್ನದ ಅಂಬಾರಿಯಲ್ಲಿ ವೀರಾಜಮಾನವಾದ ತಾಯಿ ಚಾಮುಂಡೇಶ್ವರಿಯನ್ನು ಕಣ್ತುಂಬಿಸಿಕೊಂಡು ಕೃತಾರ್ಥರಾದರು.
ಬೆಳಗ್ಗಿನಿಂದಲೇ ಮೈಸೂರಿನತ್ತ ಆಗಮಿಸಿದ ಲಕ್ಷಾಂತರ ಮಂದಿ ಅರಮನೆ ಹಾಗೂ ಜಂಬೂಸವಾರಿ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. ಪಾಸ್ ಪಡೆದವರು ಕಾಯ್ದಿರಿಸಿದ ಸ್ಥಳಗಳಲ್ಲಿ ಆಸೀನರಾದರೆ, ಉಳಿದವರ ಪೈಕಿ ಕೆಲವರು ರಸ್ತೆ ಬದಿಯಲ್ಲಿ ಸೂಕ್ತವಾದ ಜಾಗವನ್ನು ಆರಿಸಿಕೊಂಡು ಆಸೀನರಾದರೆ, ಮತ್ತೆ ಕೆಲವರು ಕಟ್ಟಡ ಹಾಗೂ ಮರಗಳ ಮೇಲೆ ಹತ್ತಿ ಕುಳಿತು ಜಂಬೂಸವಾರಿಯನ್ನು ಹತ್ತಿರದಿಂದ ವೀಕ್ಷಿಸಿದರು.
ಸಂಪ್ರದಾಯದಂತೆ ಬೆಳಿಗ್ಗೆ ಅರಮನೆ ದರ್ಬಾರ್ ಹಾಲ್ ನಲ್ಲಿ ಖಾಸಗಿ ದರ್ಬಾರ್ ಮುಗಿಸಿದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಂಪ್ರದಾಯದಂತೆ ಅರಮನೆಯಿಂದ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
ಇದೇ ಸಂದರ್ಭ ಕರಿತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಬನ್ನಿಪೂಜೆ ನೆರವೇರಿಸಿ ಬಂದ ಬಳಿಕ ಒಡೆಯರ್ ಅವರ ಅಪ್ಪಣೆ ಪಡೆದ ಬಳಿಕ ಜಂಬೂಸವಾರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಲಾಯಿತು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದಂಪತಿಗಳು ಹಾಗೂ ಸಚಿವ ಸಹದ್ಯೋಗಿಗಳು ಬಸ್ ನಲ್ಲಿ ಅರಮನೆ ಆವರಣಕ್ಕೆ ಆಗಮಿಸಿದರು. 12.56ರ ಶುಭ ಧನುರ್ ಲಗ್ನದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರವರು ನಂದಿಪೂಜೆ ನೆರವೇರಿಸಿದರು.
ಜಂಬೂಸವಾರಿಯನ್ನು ವೀಕ್ಷಿಸಲು ಗೋಲ್ಡ್ ಕಾರ್ಡ್ ಪಡೆದ ಗಣ್ಯರಿಗೆ ಅರಮನೆ ಅವರಣದಲ್ಲಿ ಸುಮಾರು ಐದು ಸಾವಿರ ಆಸನಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಯಾವೆಲ್ಲ ಕುಣಿತ, ಸ್ತಬ್ದಚಿತ್ರವಿತ್ತು.ಕರ್ನಾಟಕದ ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸುವ ಸ್ತಬ್ದ ಚಿತ್ರ ಹಾಗೂ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಸ್ತಬ್ದ ಚಿತ್ರಗಳ ಪೈಕಿ ಬೆಂಗಳೂರಿನ ಅಭಿವೃದ್ಧಿಯನ್ನು ಸಾರುವ ಮೆಟ್ರೋ ಸ್ತಬ್ದ ಚಿತ್ರ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ಕಂಬಾರ್, ಬಾಳಪ್ಪಹುಕ್ಕೇರಿ ಅವರನ್ನೊಳಗೊಂಡ ಚಿತ್ರವನ್ನು ಹೊಂದಿದ ಬೆಳಗಾವಿಯ ಸ್ತಬ್ದ ಚಿತ್ರ ಪ್ರಮುಖ ಆಕರ್ಷಣೆಯಾಗಿತ್ತು.
ಇಷ್ಟೇ ಅಲ್ಲದೇ ಮಹದೇಶ್ವರ ಬೆಟ್ಟದ ಮಹತ್ವ ಸಾರುವ ಚಾಮರಾಜನಗರದ ಸ್ತಬ್ದ ಚಿತ್ರ ಸೇರಿದಂತೆ 30 ಜಿಲ್ಲೆಗಳ ಮಹತ್ವ ಸಾರುವ ಸ್ತಬ್ದ ಚಿತ್ರವಲ್ಲದೆ, ಕಾವೇರಿ ನೀರಾವರಿ ನಿಗಮ, ವಾರ್ತ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೆಂಗಳೂರು ಕರಗಗಳ ಸ್ತಬ್ದ ಚಿತ್ರಗಳು ದಸರಾಕ್ಕೆ ಮೆರಗು ನೀಡಿದವು.
ಅರಮನೆಯಲ್ಲಿರುವ ಹಲವು ಯುದ್ಧದಲ್ಲಿ ಬಳಕೆಯಾದ ಆರು ಫಿರಂಗಿಗಳು ಜಂಬೂ ಸವಾರಿಗೆ ರಾಜಕಳೆ ನೀಡಿದವು. ಅಲ್ಲದೆ, ಗೊರವ ಕುಣಿತ, ಹುಲಿವೇಶ, ಹಗಲುವೇಷ, ಮರಗಾಲು, ನವಿಲು ಕುಣಿತ, ಕಂಸಾಳೆ, ನಗಾರಿ ನೃತ್ಯ, ಪಟದ ಕುಣಿತ, ಪೂಜಾ ಕುಣಿತ, ಕೊರಗ ಕುಣಿತ, ಕೊಡವ ನೃತ್ಯ ಸೇರಿದಂತೆ ಜಾನಪದ ಕಲಾ ತಂಡಗಳು ಜಂಬೂಸವಾರಿಯಲ್ಲಿ ಭಾಗವಹಿಸುವುದರ ಮೂಲಕ ವೀಕ್ಷಕರನ್ನು ಆಕರ್ಷಿಸಿದವು. ಕೃಪೆ ; ದಟ್ಸ್ ಕನ್ನಡ
Click this button or press Ctrl+G to toggle between Kannada and English