ಮನೆ ದರೋಡೆ ಪ್ರಕರಣ… ಇಬ್ಬರು ಅಂತಾರಾಜ್ಯ ದರೋಡೆಕೋರರ ಬಂಧನ

11:51 AM, Tuesday, April 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

arrestedಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆ ನಡೆದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಂತಾರಾಜ್ಯ ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಪೆರಿಯಶಾಂತಿ ಬಳಿ ಮಾ.9 ರಂದು ಬೈಕ್‌ನಲ್ಲಿ ತೆರಳುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಇಲ್ಯಾಸ್ (34), ನೆಲ್ಸನ್ ಸಿ.ವಿ.(30) ಬಂಧಿತರು.

ಆರೋಪಿಗಳಿಂದ ದರೋಡೆ ನಡೆಸಿ 237ಗ್ರಾಂ. ಚಿನ್ನಾಭರಣ, ದರೋಡೆ ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್, ಆಟಿಕೆ ಪಿಸ್ತೂಲ್, ಚೂರಿ, ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ರಮೆಯ ದೇಂತನಾಜೆಯ ನಾಗೇಂದ್ರ ಪ್ರಸಾದ್ ಎಂಬುವರ ಮನೆಗೆ ಈ ಮೂವರ ತಂಡ 2017ರ ನವೆಂಬರ್ 28 ರಂದು ನುಗ್ಗಿ ದರೋಡೆ ನಡೆಸಿತ್ತು. ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲದ ಶಿವಕುಮಾರ್ ಪುತ್ತೂರಾಯ ಎಂಬುವರ ಮನೆಗೆ 2017ರ ಡಿಸೆಂಬರ್ 22 ರಂದು ನುಗ್ಗಿದ ಇದೇ ತಂಡ 144ಗ್ರಾಂ ಚಿನ್ನ, ಎಟಿಎಂ ಕಾರ್ಡ್‌ಗಳನ್ನು ದರೋಡೆ ನಡೆಸಿತ್ತು. 2018 ರ ಮಾರ್ಚ್ 21ರಂದು ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಚ್ಲಂಪಾಡಿಯ ನಾರಾಯಣ ಪಿಳ್ಳೆ ಎಂಬುವರ ಮನೆಗೆ ನುಗ್ಗಿದ ಇದೇ ತಂಡ ದರೋಡೆ ನಡೆಸಿತ್ತು.

ಇದರಲ್ಲಿ ಪಟ್ರಮೆ ಹಾಗೂ ಕೆದಿಲದ ಮನೆ ದರೋಡೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಭಾಗಿಯಾಗಿದ್ದರೆ, ಇಚ್ಲಂಪಾಡಿಯ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಮಾತ್ರ ಭಾಗಿಯಾಗಿದ್ದರು. ಕೆದಿಲದಲ್ಲಿ ಮಿಕ್ಸಿ ರಿಪೇರಿಗೆಂದು ಮೊದಲು ಬಂದು ಮನೆ ನೋಡಿಕೊಂಡು ಹೋದ ಇವರು ಬಳಿಕ ದರೋಡೆಗೈದಿದ್ದರು.

ಉಳಿದ ಎರಡು ಪ್ರಕರಣಗಳಲ್ಲಿ ಸಂಜೆಯೇ ದೊಡ್ಡ ಮನೆಗಳನ್ನು ನೋಡಿ ರಾತ್ರಿಯಾಗುತ್ತಲೇ ಏಕಾಏಕಿ ನುಗ್ಗುತ್ತಿದ್ದರಲ್ಲದೆ, ಮನೆಯಲ್ಲಿದ್ದವರನ್ನು ಬೆದರಿಸಲು ಆಟಿಕೆ ಪಿಸ್ತೂಲ್, ಚಾಕು, ಚೂರಿಗಳನ್ನು ಬಳಸುತ್ತಿದ್ದರು. ಮನೆಯಲ್ಲಿದ್ದವರ ಕೈಕಾಲುಗಳನ್ನು ಕಟ್ಟಲು, ಬಾಯಿಗೆ ಅಂಟಿಸಲು ಪ್ಲಾಸ್ಟರ್ ಅನ್ನು ಬಳಸುತ್ತಿದ್ದರು. ಇದು ಪ್ರತಿ ದರೋಡೆ ಕೃತ್ಯದಲ್ಲೂ ಇವರಲ್ಲಿ ಇರುತ್ತಿತ್ತು. ಏಕಾಏಕಿ ನುಗ್ಗಿ ದರೋಡೆ ನಡೆಸಿ ಪರಾರಿಯಾಗುವುದರಲ್ಲಿ ಇವರು ನಿಸ್ಸೀಮರಾಗಿದ್ದು, ದರೋಡೆ ನಡೆಸಿದ ಬಳಿಕ ಯಾವುದೇ ಸುಳಿವು ದೊರೆಯದಂತೆ ಮಾಡುವುದರಲ್ಲಿ ಚಾಣಾಕ್ಷತೆ ಪಡೆದಿದ್ದರು.

ದರೋಡೆ ಕೃತ್ಯಕ್ಕೆ ಬರುತ್ತಿದ್ದಾಗ ಇವರು ಯಾವುದೇ ಕಾರಣಕ್ಕೂ ಮೊಬೈಲ್ ಬಳಸುತ್ತಿರಲಿಲ್ಲ. ಮನೆಗಳಿಂದ ದರೋಡೆ ಮಾಡಿದ ಮೊಬೈಲ್‌ಗಳಿಂದ ಸಿಮ್ ತೆಗೆದು ಅವುಗಳನ್ನು ಪೊಲೀಸರು ತನಿಖೆಯ ವೇಳೆ ಹಾದಿ ತಪ್ಪುವಂತೆ ಮಾಡಲು ಬಳಸುತ್ತಿದ್ದರು. ಪಟ್ರಮೆಯ ಮನೆಯಲ್ಲಿ ದರೋಡೆ ನಡೆಸಿದ ಎರಡು ಮೊಬೈಲ್‌ಗಳನ್ನು ಕಳವುಗೈದು ಬೇರೆ ಎರಡು ಮೊಬೈಲ್‌ಗಳನ್ನು ಖರೀದಿಸಿ, ದರೋಡೆ ನಡೆಸಿದ ಮೊಬೈಲ್‌ಗಳ ಸಿಮ್‌ಗಳನ್ನು ತೆಗೆದು ಅದನ್ನು ಹೊಸದಾಗಿ ಖರೀದಿಸಿದ ಎರಡು ಮೊಬೈಲ್‌ಗಳಿಗೆ ಹಾಕಿ ಒಂದನ್ನು ಶಿರಸಿ ಬಸ್‌ನಲ್ಲಿ ಹಾಗೂ ಇನ್ನೊಂದನ್ನು ತಮಿಳುನಾಡಿಗೆ ಹೋಗುವ ಬಸ್‌ನಲ್ಲಿ ಎಸೆದು ಪೊಲೀಸರ ತನಿಖೆಯ ಹಾದಿ ತಪ್ಪಿಸಲು ನೋಡಿದ್ದರು. ಈ ದರೋಡೆ ಪ್ರಕರಣ ನಡೆದ ಬಳಿಕ ಗ್ರಾಮಾಂತರ ಪ್ರದೇಶದ ಒಂಟಿ ಮನೆಯಲ್ಲಿ ವಾಸವಿರುವ ಜನಸಾಮಾನ್ಯರು ಭಯಭೀತರಾಗಿದ್ದರು.

ಈ ಮೂರು ಪ್ರಕರಣಗಳು ಯಾವುದೇ ಸುಳಿವುಗಳಿಲ್ಲದೆ ಅತ್ಯಂತ ಕ್ಲಿಷ್ಟಕರ ಸ್ಥಿತಿಯಲ್ಲಿತ್ತು. ಅದರೂ ದ.ಕ. ಜಿಲ್ಲಾ ಎಸ್ಪಿ ಡಾ. ರವಿಕಾಂತೇ ಗೌಡ, ರವರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಈ ಗಂಭೀರ ಪ್ರಕರಣವನ್ನು ಪತ್ತೆಹಚ್ಚಲು ಪ್ರತ್ಯೇಕ ತಂಡ ರಚಿಸಿ ಸೂಕ್ತ ಮಾರ್ಗದರ್ಶನ ನೀಡಿದ್ದರು. ಹೆಚ್ಚುವರಿ ಎಸ್ಪಿ ಸಜಿತ್ ಕುಮಾರ್, ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಗೋಪಾಲ ನಾಯ್ಕ ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರಿಶ್ಚಂದ್ರ, ಪ್ರವೀಣ್ ರೈ, ಇರ್ಷಾದ್, ಜಗದೀಶ್ ರವರು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English