ಮಂಗಳೂರು: ರಾಜ್ಯದಲ್ಲಿ ಚುನಾವಣಾ ಕಣ ರಂಗೇರತೊಡಗಿದೆ .ಈಗಾಗಲೇ ರಾಜಕೀಯ ಪಕ್ಷಗಳು ತಮ್ಮ ಕದನ ಕಲಿಗಳನ್ನು ಅಖಾಡಕ್ಕೆ ಇಳಿಸಿವೆ.ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು ಮುಂಬರುವ ದಿನಗಳಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಕಲರವ ಮುಗಿಲು ಮುಟ್ಟಲಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಗೂ ಮೊದಲೇ ಜನಾಶೀರ್ವಾದ ಯಾತ್ರೆ ಹೆಸರಿನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರ ನಡೆಸಿ ತೆರಳಿದ್ದಾರೆ. ಅಂತೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು ಚುನಾವಣಾ ಪ್ರಚಾರ ನಡೆಸಿದ್ದಾರೆ.
ಜನರ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಕೂಡ ಬೆಂಗಳೂರು ಸೇರಿದಂತೆ ಮೈಸೂರಿಗೆ ಭೇಟಿ ನೀಡಿ ಪ್ರಚಾರ ನಡೆಸಿದ್ದರು. ಬಿಜೆಪಿ ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇನ್ನುಳಿದಂತೆ ಗೊಂದಲಗಳಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಒಂದೆರಡು ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ. ಗೊಂದಲ, ಅಸಮಾಧಾನ, ಭಿನ್ನಾಭಿಪ್ರಾಯಗಳ ನಡುವೆ ಕರಾವಳಿಯ ಬಿಜೆಪಿ ಕಾರ್ಯಕರ್ತರಲ್ಲಿ ಸುದ್ದಿಯೊಂದು ಸಂಚಲನ ಮೂಡಿಸಿದೆ.
ಬಿಜೆಪಿ ಮೂಲಗಳ ಪ್ರಕಾರ ಮೇ 7 ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕಾಗಿ ಕರಾವಳಿಗೆ ಆಗಮಿಲಿದ್ದಾರೆ. ಮಂಗಳೂರು ಸೇರಿದಂತೆ ಕರಾವಳಿಯ ಇತರ ಭಾಗಗಳಲ್ಲಿ ಪ್ರಧಾನಿ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.ಮೇ 7 ರಂದು ಮಂಗಳೂರಿಗೆ ಆಗಮಿಸುವ ಮೋದಿ ಮೇ 8 ರಂದು ಕರಾವಳಿಯ ಹಲವಾರು ಭಾಗಗಳಲ್ಲಿ ಆಯೋಜಿಸಲಾಗುವ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಕರಾವಳಿಯ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳ ಆಯ್ಕೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಕೆಲವೆಡೆ ಬಂಡಾಯದ ಬಾವುಟ ಕೂಡ ಹಾರಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಬಿಜೆಪಿ ಈಗಾಗಲೇ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಮೂರನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ.
ಮೇ 12 ರಂದು ಚುನಾವಣೆ ನಡೆಯಲಿದ್ದು, ಅದಕ್ಕೆ 5 ದಿನ ಮುಂಚಿತವಾಗಿ ಪ್ರಧಾನಿ ಮೋದಿ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮತದಾನದ ದಿನಕ್ಕೆ ಕೇವಲ 5 ದಿನ ಬಾಕಿ ಇರುವಾಗ ಕರಾವಳಿಗೆ ಬಂದು ಸ್ಟಾರ್ ಪ್ರಚಾರಕರಾಗಿ ಮೋದಿ ಅವರು ಪಾಲ್ಗೊಳ್ಳುವ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ ಅವರ ಈ ಕೊನೆಯ ಕ್ಷಣದ ಪ್ರಚಾರ ಕರಾವಳಿಯಲ್ಲಿ ಚುನಾವಣೆಯ ದಿಕ್ಕನ್ನೇ ಬದಲಿಸಲಿದೆ ಎಂದು ಹೇಳಲಾಗುತ್ತಿದೆ.
Click this button or press Ctrl+G to toggle between Kannada and English