ಮಂಗಳೂರು: ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ಅವರು ನಾಮಪತ್ರ ಸಲ್ಲಿಸುವುದಕ್ಕೆ ಪೂರ್ವಭಾವಿಯಾಗಿ ಇಂದು ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿರುವ ಜನಾರ್ದನ ಪೂಜಾರಿಯವರ ನಿವಾಸಕ್ಕೆ ತೆರಳಿ ಅವರ ಆಶೀರ್ವಾದ ಪಡೆದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಳಿವೇ ಇಲ್ಲ, ಜಿಲ್ಲೆಯಲ್ಲಿ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಪಡೆಯುವುದರೊಂದಿಗೆ ರಾಜ್ಯದಲ್ಲೂ ಅತೀ ಹೆಚ್ಚಿನ ಸ್ಥಾನ ಗಳಿಸುತ್ತದೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಪೂಜಾರಿಯವರು ಇದೇ ವೇಳೆ ನುಡಿದರು.
ರೈ ಅವರೇ ನಿಮ್ಮಂಥ ಜನಸೇವಕರನ್ನು ಪಡೆದಿರುವುದು ಕಾಂಗ್ರೆಸ್ ಮತ್ತು ಈ ರಾಜ್ಯದ ಜನತೆಯ ಪುಣ್ಯವಾಗಿದೆ. ನೀವು ಅತೀ ಹೆಚ್ಚು ಅಂತರದಿಂದ ವಿಜಯಿಯಾಗುತ್ತೀರಿ. ನಿಮಗೆ ದೇವರ ದಯೆ ಇದೆ. ಬಂಟ್ವಾಳ ಜನತೆಯ ಆಶೀರ್ವಾದವೂ ಇದೆ ಎಂದು ಶುಭ ಕೋರಿದರು.
ತಮ್ಮ ಮನೆಗೆ ಆಗಮಿಸಿದ್ದ ರೈ ಅವರನ್ನು ಅವರ ವಾಹನದ ತನಕ ಪೂಜಾರಿಯವರು ಬೀಳ್ಕೊಟ್ಟು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಅಬ್ಬಾಸ್ ಅಲಿ, ರಾಜ್ಯ ಗೇರುಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಿ.ಹೆಚ್ ಖಾದರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English