ಬೆಂಗಳೂರು: ಟಿಕೆಟ್ ಆಕಾಂಕ್ಷಿಗಳ ಪಕ್ಷಾಂತರ ಪರ್ವದ ಪಟ್ಟಿಗೆ ಇದೀಗ ನಟ ಶಶಿಕುಮಾರ್ ಹೆಸರು ಸೇರ್ಪಡೆಯಾಗಿದೆ. ಶಶಿಕುಮಾರ್ ಹೊಸದುರ್ಗ ಟಿಕೆಟ್‌ಗಾಗಿ ‘ಕೈ’ ತೊರೆದು ‘ತೆನೆ’ ಹೊತ್ತಿದ್ದಾರೆ.
ಹೌದು, ಮಾಜಿ ಸಂಸದ ಹಾಗೂ ಚಿತ್ರನಟ ಶಶಿಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ್ದು ಜಾತ್ಯತೀತ ಜನತಾದಳವನ್ನು ಸೇರಿದ್ದಾರೆ. ಪದ್ಮನಾಭನಗರದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪಕ್ಷದ ಶಾಲು ನೀಡುವ ಮೂಲಕ ದೇವೇಗೌಡರು ಶಶಿಕುಮಾರ್ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು.
ಹೊಸದುರ್ಗ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶಶಿಕುಮಾರ್‌ಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಅಸಮಧಾನಗೊಂಡು ಪಕ್ಷ ತೊರೆದಿದ್ದಾರೆ. ಜೆಡಿಎಸ್ ಹೊಸದುರ್ಗ ಟಿಕೆಟ್ ಭರವಸೆ ನೀಡಿದ್ದರಿಂದ ಜೆಡಿಎಸ್ ಕಡೆ ಮುಖ ಮಾಡಿದರು.
ಜನತಾ ಪರಿವಾರದ ಮೂಲಕವೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದ ಶಶಿಕುಮಾರ್ 1999ರಲ್ಲಿ ಜನತಾದಳ ಇಬ್ಭಾಗವಾದಾಗ ಜೆ.ಹೆಚ್.ಪಟೇಲ್ ನೇತೃತ್ವದ ಜೆಡಿಯು ಜೊತೆ ಗುರುತಿಸಿಕೊಂಡಿದ್ದರು. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಂದು ಜೆಡಿಯುನ ಘಟಾನುಘಟಿಗಳೇ ಸೋತಿದ್ದರೂ ಶಶಿಕುಮಾರ್ ಅಚ್ಚರಿಯ ಗೆಲುವು ಪಡೆದಿದ್ದರು.
ನಂತರ ಚಿಕ್ಕಬಳ್ಳಾಪುರದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿ ಸೋತಿದ್ದರು. ಬಳಿಕ ಕಾಂಗ್ರೆಸ್‌ನತ್ತ ಮುಖಮಾಡಿದ್ದರು. ಇದೀಗ ಕಾಂಗ್ರೆಸ್ ಕೈಕೊಟ್ಟ ಪರಿಣಾಮ ಜೆಡಿಎಸ್ ಸೇರಿದ್ದು ಒಂದು ರೀತಿಯಲ್ಲಿ ಜನತಾ ಪರಿವಾರಕ್ಕೆ ಅವರು ಮರಳಿದಂತಾಗಿದೆ.
Click this button or press Ctrl+G to toggle between Kannada and English