ಹಿಂದೂ ವಿಚಾರ ಧಾರೆ, ಸಂಘಟನೆ ಶಕ್ತಿ ಮೇಲೆ ಈ ಬಾರಿ ಗೆಲುವು: ನಳಿನ್

4:49 PM, Thursday, April 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

nalin-kumarಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಈ ನಡುವೆ ಬಿಜೆಪಿ ತಮ್ಮ ಜಿಲ್ಲಾ ಚುನಾವಣಾ ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಿದೆ. ಭಾರತೀಯ ಜನತಾ ಪಾರ್ಟಿಯ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭ ಮಂಗಳೂರಿನಲ್ಲಿ ಇಂದು ನಡೆಯಿತು. ಬಿಜೆಪಿಯ ಹಿರಿಯ ಮುಖಂಡ , ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಅವರು ಚುನಾವಣಾ ಕಾರ್ಯಲಯ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಹಿಂದುತ್ವ, ಹಿಂದೂ ವಿಚಾರ ಧಾರೆ ಮತ್ತು ಸಂಘಟನಾತ್ಮಕ ಶಕ್ತಿಯ ಆಧಾರದ ಮೇಲೆ ಈ ಬಾರಿಯ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಂತೆ ನಾವು ಜಾತಿ ಹೆಸರಿನಲ್ಲಿ ಮತ ಕೇಳಲ್ಲ. ಅಭ್ಯರ್ಥಿ ಆಯ್ಕೆಯಲ್ಲಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಉಳಿದವರಂತೆ ವಾಟ್ಸಾಪ್ , ಫೇಸ್ಬುಕ್ ನಲ್ಲಿರುವವರಿಗೆ ಮಾತ್ರ ಗೊಂದಲಗಳಿವೆ ಎಂದು ವ್ಯಂಗ್ಯವಾಡಿದರು.

ಈ ಬಾರಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕರಾದ ರುಕ್ಮಯ ಪೂಜಾರಿ , ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಧಿಕಾರಿಗಳಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ದ್ವೇಷದ ರಾಜಕಾರಣ, ಜಾತಿ- ಧರ್ಮದ ಹೆಸರಿನಲ್ಲಿ ಜನರನ್ನು ವಿಭಜನೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ,” ಎಂದು ಕಿಡಿಕಾರಿದರು .

ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಜನರ ನೆಮ್ಮದಿಯ ಬದುಕಿಗೆ ಬಿಜೆಪಿಯನ್ನು ಆಡಳಿತಕ್ಕೆ ತರುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಸುಲೋಚನಾ ಭಟ್ ಮತ್ತಿತರ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English