ಮಂಗಳೂರು: ಅಖಿಲ ಭಾರತ ಹಿಂದೂ ಮಹಾಸಭಾವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 30 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಸಭಾದ ರಾಜ್ಯಾಧ್ಯಕ್ಷ ನಾ. ಸುಬ್ರಹ್ಮಣ್ಯ ರಾಜು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಿಂದೂ ಕೇಸರಿ ಪಡೆಗಳು ಒಟ್ಟಾಗಿ 150 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿಕೆ ನೀಡಿದ್ದೆ. ಅದರಂತೆ ಇದೀಗ ಹಿಂದೂ ಮಹಾಸಭಾವಲ್ಲದೆ, ಸಂಪೂರ್ಣ ಭಾರತೀಯ ಕ್ರಾಂತಿ ಪಕ್ಷ 15 ಕ್ಷೇತ್ರಗಳಲ್ಲಿ, ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ 35 ಮಂದಿಯನ್ನು ಚುನಾವಣಾ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಶಿವಸೇನೆ, ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾ, ಸಂಪೂರ್ಣ ಭಾರತೀಯ ಕ್ರಾಂತಿ ಪಕ್ಷ ಸೇರಿ ಕೇಸರಿ ಪಡೆಯೊಂದು ಅಸಿತ್ತ್ವಕ್ಕೆ ಬರಲಿದೆ ಎಂದರು.
ಹಿಂದೂ ಮಹಾಸಭಾ 1912ರಲ್ಲಿ ನೋಂದಣಿಯಾದ ಪಕ್ಷ. ಸ್ವಾತಂತ್ರದ ಬಳಿಕ ಗೋಡ್ಸೆ ಹಿಂದೂ ಮಹಾಸಭಾದವರು ಎಂಬ ನೆಲೆಯಲ್ಲಿ ಪಕ್ಷದ ಮಾನ್ಯತೆಯನ್ನು ರದ್ದುಪಡಿಸಲಾಗಿತ್ತು. ಹಾಗಾಗಿ ಸದ್ಯ ಪಕ್ಷ ನೋಂದಣಿಯಾಗಿದ್ದರೂ ಗುರುತಿಸಲ್ಪಟ್ಟಿಲ್ಲ. ಭಾರತೀಯರೆಲ್ಲರೂ ಹಿಂದೂಗಳು ಎಂಬ ದೃಷ್ಟಿಕೋನದಿಂದ ಹಿಂದೂ ಮಹಾಸಭಾ ಕಾರ್ಯಾಚರಿಸುತ್ತಿದೆ. ಹಿಂದೂ ಸಮಾಜವನ್ನು ಒಗ್ಗೂಡಿಸುವ ಉದ್ದೇಶದಿಂದ ಬಿಜೆಪಿಯ ಅಭ್ಯರ್ಥಿಗಳಿಗೆ ಪಕ್ಷ ಬೆಂಬಲ ನೀಡುತ್ತಾ ಬಂದಿದೆ. ಆದರೆ ರಾಜ್ಯದ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಜೈಲು ಪಾಲಾಗುವ ಪರಿಸ್ಥಿತಿ ಬಿಜೆಪಿ ಎದುರಿಸಬೇಕಾಯಿತು.
ಇದೀಗ ಅಂತಹ ವ್ಯಕ್ತಿಯನ್ನೇ ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿಯನ್ನಾಗಿ ಬಿಂಬಿಸಲಾಗುತ್ತಿದೆ. ರಾಜಕೀಯ ಕುತಂತ್ರದಿಂದ ಜೈಲು ಸೇರಬೇಕಾಯಿತು ಎಂಬ ಮಾತನ್ನು ಹೇಳಲಾಗುತ್ತಿದೆ. ಆದರೆ ಆ ಪ್ರಕರಣದ ತನಿಖೆ ಮಾಡಿದವರು ನಿವೃತ್ತ ಲೋಕಾಯುಕ್ತರಾಗಿದ್ದ ನ್ಯಾ.ಸಂತೋಷ್ ಹೆಗ್ಡೆ. ಅವರ ತನಿಖೆಯಲ್ಲಿ ಯಾವುದೇ ಕುತಂತ್ರ ಕಾಣುತ್ತಿಲ್ಲ. ಹಾಗಾಗಿ ಸ್ವಚ್ಛ ರಾಜಕೀಯದ ಉದ್ದೇಶದಿಂದ ಇದೀಗ ಕೇಸರಿ ಪಡೆಗಳು ಒಟ್ಟಾಗಿ ಚುನಾವಣೆ ಎದುರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪಕ್ಷವು ಚುನಾವಣಾ ಆಯೋಗದಿಂದ ‘ಟೋಪಿ’ಯನ್ನು ಚಿಹ್ನೆಯಾಗಿ ಕೋರಿಕೊಂಡಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದೆ ಪಕ್ಷವು ಬಿಳಿ ಕುದುರೆಯನ್ನು ಚಿಹ್ನೆಯಾಗಿ ಹೊಂದಿತ್ತು ಎಂದರು.
Click this button or press Ctrl+G to toggle between Kannada and English