ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಅಂಗಾರ ನಾಮಪತ್ರ ಸಲ್ಲಿಸಿದ್ದಾರೆ. ಸುಳ್ಯದ ಬಿಜೆಪಿ ಚುನಾವಣಾ ಕಚೇರಿಯಿಂದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿದ ಅಂಗಾರ ಅವರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಬಿ.ಟಿ. ಮಂಜುನಾಥರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್. ಅಂಗಾರ, ಕಳೆದ 5 ಬಾರಿಯ ಚುನಾವಣೆಗಳಲ್ಲಿ ಬಿಜೆಪಿಯನ್ನಿ ಇಲ್ಲಿನ ಜನತೆ ಗೆಲ್ಲಸಿಕೊಂಡು ಬಂದಿದ್ದಾರೆ. ಈ ಬಾರಿಯ ಚುನಾವಣೆ ನನ್ನ ದೃಷ್ಟಿಯಲ್ಲಿ ವಿಶೇಷವಾದ ಚುನಾವಣೆ. ವಾತಾವರಣ ಸಂಪೂರ್ಣ ಬದಲಾಗಿದೆ, ಜನಾಭಿಪ್ರಾಯ ಬಿಜೆಪಿಯ ಮೇಲೆ ಇದೆ. ಈ ಬಾರಿ ಸುಮಾರು 25 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದರು.
1994ರಿಂದ ಇಲ್ಲಿಯ ವರೆಗೆ ವಿರೋಧ ಪಕ್ಷ ಕಾಂಗ್ರೆಸ್ ಟೀಕೆಗಳನ್ನು ಮಾತ್ರ ಮಾಡುತ್ತಿದೆ. ಅಭಿವೃದ್ದಿ ಕೆಲಸ ಎಲ್ಲಿ ಆಗಿಲ್ಲ ಎನ್ನುವುದಕ್ಕೆ ಯಾವುದೇ ದಾಖಲೆಗಳು ಕಾಂಗ್ರೆಸ್‍ನಲ್ಲಿ ಇಲ್ಲ. 1994ರಿಂದ ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಹೇಳಿ ಭಯವನ್ನು ಹುಟ್ಟಿಸುವ ಕೆಲಸ ಮಾಡುತ್ತಿದ್ದರು. ಆದರೆ ನಾನು ಶಾಸಕ ಆದ ಮೇಲೆ ಯಾವುದೇ ಘಟನೆಗಳು ತಾಲೂಕಿನಲ್ಲಿ ನಡೆದಿಲ್ಲ. ಈ ಚುನಾವಣೆಯನ್ನು ಗೆಲ್ಲಲು ತಾಲೂಕಿನ ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ, ಎಲ್ಲಾ ವರ್ಗದ ಜನರ ಸಂಪೂರ್ಣ ಬೆಂಬಲ ಬಿಜೆಪಿಗೆ ಇದೆ. ತಾಲೂಕು, ಜಿಲ್ಲೆ, ರಾಜ್ಯದಲ್ಲಿ ಬಿಜೆಪಿಗೆ ಒಳ್ಳೆಯ ವಾತಾವರಣ ಇದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮುಖಂಡರಾದ ಉಮೇಶ್ ವಾಗ್ಲೆ, ಪಿ.ಜಿ.ಎಸ್.ಎನ್. ಪ್ರಸಾದ್, ಭಾಗೀರಥಿ ಮುರುಳ್ಯ ಈ ಸಂದರ್ಭದಲ್ಲಿದ್ದರು.
Click this button or press Ctrl+G to toggle between Kannada and English