ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಜೆ ಅಭ್ಯರ್ಥಿ ಬಿ.ಶ್ರೀರಾಮುಲು ಇಂದು ನಾಮಪತ್ರ ಸಲ್ಲಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಇತ್ತೀಚೆಗೆ ಪಕ್ಷ ಸೇರಿರುವ ಎನ್.ವೈ.ಗೋಪಾಲಕೃಷ್ಣ ಉಪಸ್ಥಿತರಿದ್ದು ಗಮನ ಸೆಳೆದರು.
ಸ್ನೇಹಿತ ಶ್ರೀರಾಮುಲುಗೆ ಮೊಳಕಾಲ್ಮೂರು ಕ್ಷೇತ್ರದ ಟಿಕೆಟ್ ಘೋಷಣೆ ಆಗುವ ಮೊದಲೇ ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಟಿಕೆಟ್ ಘೋಷಣೆ ನಂತರ ಪಟ್ಟಣದ ಹೊರವಲಯದಲ್ಲಿ ಮನೆ ಬಾಡಿಗೆ ಪಡೆದು ನೆಲೆಯೂರಿದ್ದಾರೆ.
ಮೊಳಕಾಲ್ಮೂರು ಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ರಾಜಕೀಯ ನಿರ್ಣಾಯಕ ಹಂತ ತಲುಪಿದೆ. ಗಂಡುಗಲಿ ಶ್ರೀರಾಮುಲುಗೆ ಗೆಲ್ಲುವ ಶಕ್ತಿ ಇದೆ. ಬಹಳ ವರ್ಷಗಳ ನಂತರ ಜನಾರ್ದನ ರೆಡ್ಡಿ ಬಂದಿರುವುದು ಆನೆ ಬಲ ಬಂದಂತಾಗಿದೆ ಎಂದರು.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ಮಾತನಾಡಿ, ಶ್ರೀರಾಮುಲು ಅವರು ಭಾರಿ ಬಹುಮತದಿಂದ ಗೆದ್ದು, ಶಾಸಕರಾಗುವುದು ಖಚಿತ ಹಾಗೂ ಯಡಿಯೂರಪ್ಪ ಸಿಎಂ ಆಗುವುದು ಖಚಿತ. ಸಿದ್ದರಾಮಯ್ಯನವರ ಸರ್ಕಾರ ಜನ ವಿರೋಧಿ ಆಡಳಿತ ನಡೆಸಿದೆ. ಬಡವರ, ರೈತರ ಸಮಸ್ಯೆಗಳನ್ನ ಪರಿಹರಿಸಲು ಸಂಪೂರ್ಣವಾಗಿ ಕಾಂಗ್ರೆಸ್ ಸೋತಿದೆ. ನರೇಂದ್ರ ಮೋದಿ ಭಾರತ ಮಾತ್ರವಲ್ಲ ಜಗತ್ತಿನ ನಾಯಕರು. ಯಡಿಯೂರಪ್ಪನವರನ್ನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿದ ದಿನದಿಂದ ಸಿದ್ದರಾಮಯ್ಯನವರು ಹೆದರಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯನವರು 60 ಲಕ್ಷ ರೂಪಾಯಿಯ ವಾಚ್ ಕಟ್ತಾರೆ. ಇಂತವರು ಬಡವರ ಪರವಾಗಿ ಕೆಲಸ ಮಾಡ್ತಾರೆ ಅಂತಾ ಹೇಗೆ ಯೋಚ್ನೆ ಮಾಡ್ತೀರಿ ಎಂದರು.
ಇದೇ ವೇಳೆ ಜನಾರ್ದನ ರೆಡ್ಡಿ ಮಾತನಾಡಿ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಲಕ್ಷ್ಮಿ (ದೇವತೆ) ಸಿಎಂ ಚೇಬರ್‌ನಲ್ಲಿದ್ದರು. ಬಸವಣ್ಣನ ಕಲ್ಯಾಣ ರಾಜ್ಯ ಕಲ್ಪನೆ ಅವರಲ್ಲಿತ್ತು. ರಾಜ್ಯದಲ್ಲಿ ರಾಮುಲು ಪ್ರಚಾರ ಮಾಡುತ್ತಾರೆ, ನಾನು ಕ್ಷೇತ್ರದ ಬೀದಿ ಬೀದಿ, ಮನೆ ಮನೆಗೆ ಸುತ್ತಾಟ ನಡೆಸುವೆ. ಸಿದ್ದರಾವಣ (ಸಿದ್ದರಾಮಯ್ಯ) ಸಂಹಾರಕ್ಕೆ ಶ್ರೀರಾಮುಲು ಶಂಖನಾದ ಬಾರಿಸುತ್ತಿದ್ದಾರೆ ಎಂದರು.
Click this button or press Ctrl+G to toggle between Kannada and English