ಬೆಳ್ತಂಗಡಿ : ಬೆಳ್ತಂಗಡಿ ಸಮೀಪದ ಸವಣಾಳು ಬಳಿ ಶನಿವಾರ ಮಧ್ಯರಾತ್ರಿ ನಕ್ಸಲ್ ನಿಗ್ರಹ ಪಡೆ ಮತ್ತು ನಕ್ಸಲರ ಮಧ್ಯೆ ಭೀಕರ ಗುಂಡಿನ ಕಾಳಗ ನಡೆದಿದ್ದು ನಕ್ಸಲ್ ನಿಗ್ರಹ ಪಡೆ ಪೇದೆ ಮಾನೆ ಗುಂಡಿಗೆ ಬಲಿಯಾಗಿದ್ದಾರೆ.ನಕ್ಸಲರ ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು.
ಬೆಳ್ತಂಗಡಿಯಿಂದ ಹದಿನೇಳು ಕಿ.ಮೀ ದೂರದಲ್ಲಿರುವ ಸವಣಾಳು ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ನೆರವಿನೊಂದಿಗೆ ಮಧ್ಯರಾತ್ರಿಯಿಂದಲೇ ಕೋಂಬಿಂಗ್ ಆಪರೇಶನ್ ಶುರು ಹಚ್ಚಿಕೊಂಡಿದ್ದರು. ಇದನ್ನರಿತ ನಕ್ಸಲರು ಪ್ರತಿ ದಾಳಿ ನಡೆಸಿದಾಗ ಪೇದೆ ಮಾನೆ ಸಾವಿಗೀಡಾಗಿದ್ದಾರೆ. ಇನ್ನೂ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.
ಮಾನೆ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಬೆಂಗಳೂರಿನ ಕೆಎಸ್ಆರ್ ಪಿ ತುಕಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾನೆ, ಸ್ವಇಚ್ಛೆಯಿಂದ ಇತ್ತಿಚೆಗಷ್ಟೇ ನಕ್ಸಲ್ ನಿಗ್ರಹ ಪಡೆ ಸೇರಿಕೊಂಡಿದ್ದರು. ಮಾನೆ ವಾಸವಾಗಿದ್ದ ಕೋರಮಂಗಲ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಈಗ ದುಃಖದ ಛಾಯೆ ಆವರಿಸಿದೆ.
ವಿಕ್ರಮ್ ಗೌಡ ನೇತೃತ್ವದ ನೇತ್ರಾವತಿ ನಕ್ಸಲ್ ತಂಡ ಈ ದಾಳಿ ನಡೆಸಿರುವ ಶಂಕೆಯಿದೆ. ನಕ್ಸಲರಿಗಾಗಿ ಹುಡುಕಾಟ ಇನ್ನೂ ಜಾರಿಯಲ್ಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆ ರವಾನೆಗೆ ಕೋರಲಾಗಿದೆ ಎಂದು ಮಂಗಳೂರು ಎಸ್ಪಿ ಭೋಲಾರಾಂ ತಿಳಿಸಿದ್ದಾರೆ.
Click this button or press Ctrl+G to toggle between Kannada and English