ಮಂಗಳೂರು: ಚುನಾವಣಾ ಪ್ರಚಾರಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎ.27ರಂದು ಬಂಟ್ವಾಳಕ್ಕೆ ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ, ಎ.27ರಂದು ಬೆಳಗ್ಗೆ ಬಂಟ್ವಾಳಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಬಿ.ಸಿ.ರೋಡ್ ಸಮೀಪದ ಜೋಡುಮಾರ್ಗ ಉದ್ಯಾನವನದಲ್ಲಿ ನಡೆಯುವ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಚುನಾವಣಾ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷಕ್ಕೆ ಗೆಲುವು ಶತಸಿದ್ಧ. ಚುನಾವಣೆ ಎದುರಿಸಲು ಜಿಲ್ಲಾ ಕಾಂಗ್ರೆಸ್ ಸರ್ವ ಸನ್ನದ್ಧವಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ರಾಜ್ಯ ಬಿಜೆಪಿಯಲ್ಲೇ ಗೊಂದಲ ಇದೆ. ಬಿಜೆಪಿ ಒಡೆದ ಮನೆ. ಬೆಂಗಳೂರಿನ ಬಿಜೆಪಿಗೆ 8 ಬಾಗಿಲಿದ್ದರೆ, ದ.ಕ. ಜಿಲ್ಲಾ ಬಿಜೆಪಿಗೆ 5 ಬಾಗಿಲು ಇದೆ. ಬಿಜೆಪಿ ಅತೃಪ್ತರು ನಮ್ಮಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ರಮಾನಾಥ ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಹೇಳಿರುವಂತೆ ನನಗೆ ವಿಶ್ರಾಂತಿಯ ಅಗತ್ಯವಿಲ್ಲ, ನಳಿನ್‌ಗೆ ಇರಬಹುದು. ವರ್ಷದೊಳಗೆ ಅವರಿಗೆ ಸಂಪೂರ್ಣ ವಿಶ್ರಾಂತಿ ಕೊಡುತ್ತೇವೆ ಎಂದು ರಮಾನಾಥ ರೈ ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕಾಂಗ್ರೆಸ್ ಪಕ್ಷದ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಯು.ಬಿ.ವೆಂಕಟೇಶ್, ರಾಜನಾಥ ಕೋಟ್ಯಾನ್, ಇಬ್ರಾಹೀಂ ಕೋಡಿಜಾಲ್, ಬಿ.ಎಚ್.ಖಾದರ್, ಭಾಸ್ಕರ ಮೊಯ್ಲಿ, ಮಮತಾ ಗಟ್ಟಿ, ಶಶಿಧರ ಹೆಗ್ಡೆ, ಪೃಥ್ವಿರಾಜ್, ಮಮತಾ ಗಟ್ಟಿ, ಎ.ಸಿ. ವಿನಯರಾಜ್, ಧನಂಜಯ ಅಡ್ಪಂಗಾಯ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English