ಮಂಗಳೂರು : ಬಿಜೆಪಿ ಪೂರ್ತಿ ಗೊಂದಲದ ಗೂಡಾಗಿದೆ. ಬಿಜೆಪಿ ಹಿರಿಯ ನಾಯಕರನ್ನೇ ಕಾರ್ಯಕರ್ತರು ಅವಾಚ್ಯವಾಗಿ ನಿಂದಿಸುತ್ತಿದ್ದಾರೆ . ಬಿಜೆಪಿ ಕಾರ್ಯಕರ್ತರೇ ಬಿಜೆಪಿ ನಾಯಕರಿಗೆ ವಿಶ್ರಾಂತಿ ಕೊಡಲಿದ್ದಾರೆ ಎಂದು ಸಚಿವ ರಮಾನಾಥ್ ರೈ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಗೆ ಬೆಂಗಳೂರಿನಲ್ಲಿ ಎಂಟು ಬಾಗಿಲು ಇದೆ. ದಕ್ಷಿಣ ಕನ್ನಡದ ಬಿಜೆಪಿಗೆ ಐದು ಬಾಗಿಲು ತೆರೆದುಕೊಂಡಿದೆ ಎಂದು ಲೇವಡಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಬಿಜೆಪಿ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ಕಾಂಗ್ರೆಸ್ ಗೆ ಶೀಘ್ರದಲ್ಲೇ ಸೇರ್ಪಡೆಯಾಗಲಿದ್ದಾರೆ. ಒಂದು ವೇಳೆ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗದಿದ್ದರೂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನೂಕೂಲವಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದೆಂದು ಅವರು ಮಾರ್ಮಿಕವಾಗಿ ನುಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ನನಗೆ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ . ಆದರೆ ವಾಸ್ತವದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ಕಾರ್ಯಕರ್ತರು ಹಾಗು ಮುಖಂಡರೇ ವಿಶ್ರಾಂತಿ ನೀಡಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.
ಜಾತ್ಯಾತೀತ ಸಿದ್ದಾಂತವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ವ್ಯಕ್ತಿ ನಾನು. ನನ್ನನ್ನು ಮತೀಯವಾದಿ ಎಂದು ಹೇಳಿದರೆ ಸಹಿಸಲಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯ ಸ್ಥಾಪಿಸಲು ಯಾವ ತ್ಯಾಗಕ್ಕೂ ಸಿದ್ದ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ 130 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಹೇಳಿದರು.
ಇದೇ ಬರುವ ಏಪ್ರಿಲ್ 27 ರಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು ರೋಡ್ ಶೋ ನಡೆಸಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ನಂತರ ಶ್ರೀ ಕ್ಷೇತ್ರ ಧಾರ್ಮಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
Click this button or press Ctrl+G to toggle between Kannada and English