ಬೆಳಗಾವಿ ಜಿಲ್ಲೆಯಲ್ಲಿ ಅಖಾಡಕ್ಕಿಳಿದ ಮೂವರು ಮಹಿಳೆಯರು!

3:51 PM, Wednesday, April 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

belagaviಬೆಳಗಾವಿ: ಬ್ರಿಟಿಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಜನ್ಮಭೂಮಿ ಬೆಳಗಾವಿ ಜಿಲ್ಲೆಯಲ್ಲಿ ಮೂವರು ಮಹಿಳೆಯರು ಈ ಸಲದ ಚುನಾವಣೆಯ ಅಖಾಡದಲ್ಲಿದ್ದಾರೆ. ಒಬ್ಬರಿಗೆ ಬಿಜೆಪಿ ಗ್ರೀನ್‌ ಸಿಗ್ನಲ್‌ ನೀಡಿದರೆ ಇಬ್ಬರು ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

18 ವಿಧಾನಸಭಾ ಕ್ಷೇತ್ರ ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಅಷ್ಟಕ್ಕಷ್ಟೆ. ಕಳೆದ ಸಲ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಶಶಿಕಲಾ ಜೊಲ್ಲೆ ಗೆಲುವು ದಾಖಲಿಸುವ ಮೂಲಕ ಜಿಲ್ಲೆಯ ಏಕೈಕ ಮಹಿಳಾ ಶಾಸಕಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ ಮತ್ತೆ ಕಣದಲ್ಲಿರುವ ಶಶಿಕಲಾ ಜೊಲ್ಲೆ ಅವರು, ಗೆಲುವಿಗಾಗಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನುಳಿದಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್‌‌ ಹಾಗೂ ಖಾನಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಅಖಾಡಕ್ಕೆ ಧುಮಕಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಏಕಕಾಲದಲ್ಲಿ ಮೂವರು ಮಹಿಳೆಯರು ಸ್ಪರ್ಧೆಗೆ ಇಳಿದಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಕಳೆದ ಚುನಾವಣೆಯಲ್ಲಿಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಎದುರಾಳಿ ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿಯೊಡ್ಡಿ ಸೋಲನುಭವಿಸಿದ್ದರು. ಇದೀಗ ಮತ್ತೆ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಗಿಟ್ಟಿಸಿಕೊಂಡಿರುವ ಅವರು, ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಸಲ ಗೆದ್ದರೆ ಮಾತ್ರ ಲಕ್ಷ್ಮಿ ಅವರಿಗೆ ವಿಧಾನಸಭೆ ಪ್ರವೇಶದ ಕನಸು ನನಸಾಗಲಿದೆ.

ನಿಪ್ಪಾಣಿ ಕ್ಷೇತ್ರದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಬಿಜೆಪಿ ನಾಯಕರು ಮತ್ತೆ ಟಿಕೆಟ್ ನೀಡಿದ್ದಾರೆ. ಕಾಂಗ್ರೆಸ್‌‌ನ ಕಾಕಾಸಾಹೇಬ್ ಪಾಟೀಲ್‌‌ ಅವರು ಜೊಲ್ಲೆ ಅವರಿಗೆ ಎದುರಾಳಿಯಾಗಲಿದ್ದಾರೆ.

ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿ ಅಂಜಲಿ ನಿಂಬಾಳ್ಕರ್ ಇದೇ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮಕಿದ್ದಾರೆ. ಖಾನಾಪುರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್ ಗಿಟ್ಟಿಸಿಕೊಂಡಿರುವ ಅಂಜಲಿ ವಿಧಾನಸಭೆ ಪ್ರವೇಶದ ಕನಸು ಕಾಣುತ್ತಿದ್ದಾರೆ. ಅಂಜಲಿ ತಾಯಿ ಫೌಂಡೇಶನ್ ಮೂಲಕ ಸಾಮಾಜಿಕ ಕಾರ್ಯದಲ್ಲಿಯೂ ತೊಡಗಿರುವ ಅಂಜಲಿ, ಕ್ಷೇತ್ರದ ಮತದಾರರ ಜತೆಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಹಾಲಿ ಶಾಸಕ ಎಂಇಎಸ್‍ನ ಅರವಿಂದ ಪಾಟೀಲ್‌ ಇವರಿಗೆ ಎದುರಾಳಿಯಾಗಲಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮ ಅವರ ಜಿಲ್ಲೆಯಲ್ಲಿ ಇದೆ ದೇ ಮೊದಲ ಬಾರಿಗೆ ಮೂರು ಜನ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿದ್ದು ಜಿಲ್ಲೆಯ ಮಹಿಳಾ ಮತದಾರರ ಸಂತಸಕ್ಕೆ ಕಾರಣವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English