ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಿದ್ದಾರೆ. ರಾಹುಲ್ ಗಾಂಧಿ ಮಂಗಳೂರಿಗೆ ಬಂದು ತಮಗೆ ನೀಡಬೇಕಾದ ಸ್ಥಾನಮಾನ ಕುರಿತು ಭರವಸೆ ನೀಡುವವರೆಗೂ ಚುನಾವಣಾ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಮಂಗಳೂರಿನಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, 2013 ರ ಚುನಾವಣೆ ಸಂದರ್ಭದಲ್ಲಿ ಪಕ್ಷದ ಕೆಲ ತುಂಡು ರಾಜಕಾರಣಿಗಳಿಂದಾಗಿ ನನಗೆ ಟಿಕೆಟ್ ಕೈ ತಪ್ಪಿತ್ತು. ಆದರೆ ಈ ಬಾರಿಯಾದರೂ ಪಕ್ಷ ಟಿಕೆಟ್ ನೀಡಬಹುದೆಂಬ ಆಶಾಭಾವದಲ್ಲಿದ್ದೆ.
ಆದರೆ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಈ ಬಾರಿ ಮತ್ತೇ ಅದೇ ತುಂಡು ರಾಜಕಾರಣಿಗಳಿಂದಲೇ ಟಿಕೆಟ್ ಕೈ ತಪ್ಪಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಬಾರಿ ಟಿಕೆಟ್ ಕೈತಪ್ಪಿದ್ದರೂ ಅಂದಿನ ರಾಜ್ಯದ ಉಸ್ತುವಾರಿಯಾಗಿದ್ದ ಎ.ಕೆ. ಆ್ಯಂಟನಿ ನನಗೆ ಎಂಎಲ್ಸಿ ಹುದ್ದೆ ನೀಡುವುದಾಗಿ ಭರವಸೆ ನೀಡಿದ್ದರು.
ಆದರೆ 5 ವರ್ಷ ಕಳೆದರೂ ಅವರು ನೀಡಿದ್ದ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ. ಇದು ನನಗೆ ಪಕ್ಷ ಮಾಡಿದ ಅಕ್ಷಮ್ಯ ಅಪರಾಧ. ಈ ಬಾರಿ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದರು ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು. ಈಗಾಗಲೇ ನನಗೆ ಬೇರೆ ಪಕ್ಷಗಳಿಂದ ಕರೆ ಬರುತ್ತಿದ್ದು ಪಕ್ಷ ಸೇರಲು ಆಹ್ವಾನ ಬಂದಿದೆ. ಆದರೆ ನಾನು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅವರು ತಮ್ಮ ನಿಲುವು ಸ್ಪಷ್ಟಪಡಿಸಿದರು. ಆದರೆ, ಈ ಹಿಂದೆ ಪಕ್ಷ ನನಗೆ ಎಂಎಲ್ಸಿ ಸ್ಥಾನ ನೀಡುವ ಆಶ್ವಾಸನೆ ನೀಡಿದಂತೆ ಈ ಬಾರಿ ಪಕ್ಷ ಅಧಿಕಾರಕ್ಕೆ ಬಂದರೆ ಎಂಎಲ್ಸಿ ಹುದ್ದೆಯನ್ನು ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇದೇ ಬರುವ ಏಪ್ರಿಲ್ 27 ರಂದು ರಾಹುಲ್ ಗಾಂಧಿ ಮಂಗಳೂರಿಗೆ ಭೇಟಿ ನೀಲಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಲಿದ್ದೇನೆ. ಎ. 27ರಂದು ವೇಣುಗೋಪಾಲ್ ಅವರು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಸುವ ಅಶ್ವಾಸನೆ ನೀಡಿದ್ದಾರೆ. ಆ ಮಾತುಕತೆಯ ಬಳಿಕ ಚುನಾವಣೆಯಲ್ಲಿ ಪ್ರಚಾರ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಮುಂಬರುವ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದು ನನಗೆ ಪಕ್ಷ ಎಂಎಲ್ಸಿ ಸ್ಥಾನ ನೀಡಿದರೂ ಎತ್ತಿನಹೊಳೆ ಯೋಜನೆ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರಾಣ ಹೋದರೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಡು ಮಾಡುವ ಈ ಯೋಜನೆ ಬಗ್ಗೆ ಮೌನ ಧೋರಣೆ ತಾಳುವುದಿಲ್ಲ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English