ಸದಾಶಯ ‘ಬಿಸು ಸಂಚಿಕೆ’ ಬಿಡುಗಡೆ-ಕವಿಕೂಟ

5:39 PM, Thursday, April 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bunts-welfareಮಂಗಳೂರು: ‘ಸಂಘ-ಸಂಸ್ಥೆಗಳು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಳ್ಳುವುದು ಸಾಮಾನ್ಯ. ಆದರೆ ಪತ್ರಿಕೆ ಮತ್ತು ಸಾಹಿತ್ಯ ಕೃತಿಗಳ ಪ್ರಕಟನೆಯಿಂದ ಅವು ಶಾಶ್ವತ ನೆಲೆ ಕಂಡುಕೊಳ್ಳತ್ತವೆ’ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಹೇಳಿದ್ದಾರೆ.

ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಕುಡ್ಲ ಪೆವಿಲಿನ್ ಸಭಾಂಗಣದಲ್ಲಿ ‘ಸದಾಶಯ’ ತ್ರೈಮಾಸಿಕದ ‘ಬಿಸು ಸಂಚಿಕೆ’ಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

‘ಸಮಾಜದಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸೂಕ್ತ ವೇದಿಕೆ ಒದಗಿಸುವುದರೊಂದಿಗೆ ವರ್ಷದಲ್ಲಿ ಒಂದೆರಡು ಮೌಲಿಕ ಗ್ರಂಥಗಳನ್ನು ಹೊರತರುವ ಮೂಲಕ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವುದು ಸಂಘಟನೆಗಳ ಗುರಿಯಾಗಬೇಕು’ ಎಂದವರು ನುಡಿದರು.

ಪುತ್ತೂರು ಮಹಿಳಾ ಸರಕಾರಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಪರಿಸರ ಚಿಂತಕ ಡಾ.ನರೇಂದ್ರ ರೈ ದೇರ್ಲ ‘ಬಿಸು ಸಂದೇಶ’ ನೀಡಿ ಮಾತನಾಡುತ್ತಾ, ‘ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ತುಳುವರ ಆಚರಣೆಯ ಮೂಲಕ ನಮ್ಮ ಮುಂದಿನ ಜನಾಂಗದಲ್ಲಿ ನಿಸರ್ಗದ ಜೊತೆಗಿನ ಒಡನಾಟದ ಬಗೆಗಿನ ಮಹತ್ವವನ್ನು ತಿಳಿಸಿ ಜಾಗೃತಿ ಮೂಡಿಸಬೇಕಿದೆ’ ಎಂದರು.

ಟ್ರಸ್ಟ್ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದೇವಿ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಮೈನಾ ಎ.ಶೆಟ್ಟಿ ಬಿಸುಕಣಿ ಇಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಭಾಸ್ಕರ ಕೆ. ಹಾಗೂ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ‘ಬಿಸು-ತುಳುವರ ಯುಗಾದಿ’ ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು.

ಸದಾಶಯದ ಪ್ರಧಾನ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.

ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಭಂಡಾರಿ ಬಿಲ್ಡರ್ಸ್ ಆಡಳಿತ ನಿರ್ದೇಶಕ ಲಕ್ಷ್ಮೀಶ ಭಂಡಾರಿ ಮುಖ್ಯ ಅತಿಥಿಗಳಾಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English