ಮಂಗಳೂರು: ಮಂಬರುವ ವಿಧಾನಸಭಾ ಚುನಾವಣೆಗೆ ಒಂದೆಡೆ ಕಾಂಗ್ರೆಸ್, ಬಿಜೆಪಿ ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸುತ್ತಿವೆ. ಈ ನಡುವೆ ಚುನಾವಣಾ ಕಣಕ್ಕೆ ಧುಮುಕಿರುವ ಸಿಪಿಐಎಂ ಕೂಡ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಜನಪರ ಪ್ರಣಾಳಿಕೆಯನ್ನು ಸಿದ್ದ ಪಡಿಸಿದ್ದು, ಗುರುವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸಿಪಿಐಎಂ ಅಭ್ಯರ್ಥಿ ಮುನೀರ್ ಕಾಟಿಪಳ್ಳ, “ಮಂಗಳೂರು ಉತ್ತರ ಕ್ಷೇತ್ರದ ಜನಸಾಮಾನ್ಯರು ಹಲವು ರೀತಿಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಳೆದ ಎರಡು ದಶಕಗಳಲ್ಲಿ ಕ್ಷೇತ್ರದಲ್ಲಿನ ಗಂಭೀರ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಪೂರ್ಣವಾಗಿ ಕಡೆಗಣಿಸಿದ್ದಾರೆ,” ಎಂದು ಆರೋಪಿಸಿದರು.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ವ್ಯಾಪಾರ, ಉದ್ಯಮ ಹಿತಾಸಕ್ತಿಗಳು ಪೂರ್ಣವಾಗಿ ಮೇಲುಗೈ ಸಾಧಿಸಿದ್ದು ಜನಸಾಮಾನ್ಯರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಮಂಗಳೂರು ಉತ್ತರ ಕ್ಷೇತ್ರದ ಅಗತ್ಯಗಳು, ಕೊರತೆಗಳು, ಎದುರಲ್ಲಿ ಇರುವ ಸವಾಲುಗಳು ಮತ್ತು ತುರ್ತು ಗಮನ ಹರಿಸಬೇಕಾದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದ ಅವರು ಸಿಪಿಐಎಂನ ಈ ಪ್ರಣಾಳಿಕೆಯು ‘ಸರ್ವಾಂಗೀಣ ಅಭಿವೃದ್ಧಿಗಾಗಿ ಜನಪರ ಪ್ರಣಾಳಿಕೆ’ ಯಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಕ್ರಮ, ಎಡಿಬಿ – ಕುಡ್ಸೆಂಪ್ 360 ಕೋಟಿಯ ಒಳಚರಂಡಿ ಕಾಮಗಾರಿಯಲ್ಲಾದ ಭ್ರಷ್ಟಾಚಾರದ ತನಿಖೆ, ತಪ್ಪಿತಸ್ಥರಿಗೆ ಶಿಕ್ಷೆ, ನಗರ ಪ್ರದೇಶದಲ್ಲಿ ಒಳ ಚರಂಡಿ ಸಹಿತ ಮೂಲಭೂತ ಸೌಲಭ್ಯಗಳ ನಿರ್ಮಾಣ, ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ, ಗುರುಪುರ ನೂತನ ಸೇತುವೆ ನಿರ್ಮಾಣ, ಗಾಂಜಾ, ಡ್ರಗ್ಸ್ ಸಹಿತ ಮಾದಕ ದ್ರವ್ಯ ಜಾಲಗಳ ನಿರ್ಮೂಲನೆ, ಕೋಮುಗಲಭೆಗಳಿಗೆ ಕಡಿವಾಣ, ಸೌಹಾರ್ದತೆಗೆ ಒತ್ತು, ಯುವಜನರ ಉದ್ಯೋಗ ಸೃಷ್ಟಿಗೆ ಒತ್ತು, ಪಂಜಿಮೊಗರು ಜೋಡಿ ಕೊಲೆ, ರಾಜೇಶ್ ಪೂಜಾರಿ ಕೊಲೆ ಸೇರಿದಂತೆ ವಿವಿಧ ಕೊಲೆ ಪ್ರಕರಣಗಳ ಉನ್ನತ ಮಟ್ಟದ ತನಿಖೆ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆಗಳಿವೆ.
ಪಲ್ಗುಣಿ, ನೇತ್ರಾವತಿ ನದಿ ಮಾಲಿನ್ಯದ ವಿರುದ್ದ ಕಠಿಣ ಕ್ರಮ, ನದಿ ಉಳಿಸಲು ಯೋಜನೆ, ಮರಳುಗಾರಿಕೆ ನೀತಿ ರೂಪಿಸಲು ಒತ್ತು, ಜೂಜು ಕೇಂದ್ರಗಳು, ಅಕ್ರಮ ಸ್ಕಿಲ್ ಗೇಮ್, ವೀಡಿಯೋ ಗೇಮ್ ಗಳ ಮೇಲೆ ಕ್ರಮ, ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ, ಪ್ರತಿ ಗ್ರಾಮಗಳಿಗೂ ಸರಕಾರಿ ಬಸ್ ಸೌಲಭ್ಯಕ್ಕೆ ಪ್ರಯತ್ನ ಇವೇ ಮೊದಲಾದ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಎಡಿಬಿ ಪ್ರಥಮ ಹಂತದ 360 ಕೋಟಿ ರೂಪಾಯಿಯ ಸಾಲ ಯೋಜನೆಯಲ್ಲಿ ರೂಪಿಸಿದ ಸುರತ್ಕಲ್ ಭಾಗದ ಒಳಚರಂಡಿ ಯೋಜನೆ, ಎರಡನೇ ಹಂತದ 410 ಕೋಟಿಯ ಯೋಜನೆಗಳಲ್ಲಿ ನಡೆದಿರುವ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ ಈ ಚುನಾವಣೆಯ ಪ್ರಮುಖ ವಿಷಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
Click this button or press Ctrl+G to toggle between Kannada and English