ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನವ ಭಾರತ ನಿರ್ಮಾಣದ ಕನಸಿಗೆ ರಾಜ್ಯದ ಮತದಾರರು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಹೆಬ್ಬಾಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರೊಂದಿಗೆ ಭೂಪಸಂದ್ರ ವಾರ್ಡ್‍ನ ಸೆಂಟ್ರಲ್ ಎಕ್ಸೈಸ್ ಬಡಾವಣೆಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ನಂತರ ಸ್ಥಳೀಯ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿದರು.
ನಂತರ ಮಾತನಾಡಿದ ಅವರು, ರಾಜ್ಯದ ಮತದಾರರು ಮೋದಿ ನೇತೃತ್ವದ ಆಭಿವೃದ್ದಿ ಪರ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ನವ ಬೆಂಗಳೂರು-ನವ ಭಾರತ ಘೋಷಣೆ ಅಡಿಯಲ್ಲಿ ಪ್ರಧಾನಿ ಮೋದಿಯವರ ಕನಸನ್ನು ನನಸಾಗಿಸುವುದು ನಮ್ಮ ಕೈಯಲ್ಲಿದೆ. ರಾಜ್ಯದ ಮತದಾರರು ಈ ನಿಟ್ಟಿನಲ್ಲಿ ಈಗಾಗಲೇ ನಿರ್ಧಾರವನ್ನು ಕಂಡುಕೊಂಡಿರುವ ಶುಭ ಸೂಚನೆಗಳು ಕಂಡಬರುತ್ತಿವೆ. ರಾಜ್ಯದ ಉದ್ದಗಲಕ್ಕೂ ಪ್ರಧಾನಿ ಮೋದಿಯವರು ಸಂಚರಿಸಲಿದ್ದು, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ನಗರ ಇನ್ನಷ್ಟು ಸುಂದರಗೊಳಿಸಲು ಬಿಜೆಪಿ ಸರ್ಕಾರ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಅಲ್ಲದೆ, ಕೇವಲ ಎರಡೇ ವರ್ಷಗಳಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶಾಸಕರಾದ ವೈ.ಎ.ನಾರಾಯಣಸ್ವಾಮಿಯವರ ಗೆಲವು ನಮ್ಮ ಪ್ರಧಾನಿಯವರ ಕನಸು ನನಸಾಗಲು ಮಹತ್ವದ ಕೊಡುಗೆಯನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ. ಬಿ-ಪ್ಯಾಕ್ ನಂತಹ ಪ್ರಮುಖ ನಾಗರಿಕ ಸಂಸ್ಥೆಗಳು ನಮ್ಮ ಶಾಸಕರಿಗೆ ಅತ್ಯುತ್ತಮ ಶಾಸಕ ಎನ್ನುವ ಬಿರುದನ್ನು ನೀಡಿರುವುದು ಹೆಮ್ಮೆಯ ಸಂಗತಿಯೇ ಸರಿ ಎಂದರು.
ಚುನಾವಣೆಯ ಸಂಧರ್ಭದಲ್ಲಿ ಹಣವನ್ನು ನೀರಿನಂತೆ ಚೆಲ್ಲುವ ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಏರಿದ ಕೂಡಲೇ ಭ್ರಷ್ಟಾಚಾರವನ್ನು ಪ್ರಾರಂಭಿಸುತ್ತಾರೆ. ಸುಶಿಕ್ಷಿತ ಹಾಗೂ ಸುಸಂಸ್ಕತರಾದ ನಾರಾಯಣಸ್ವಾಮಿ ಅವರಿಗೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಮತ ನೀಡಿ ಎಂದು ತಿಳಿಸಿದರು.
ಹೆಬ್ಬಾಳ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಮಾತನಾಡಿ, ಹಣ ಮತ್ತು ತೋಳ್ಬಲದ ನಡುವೆ ಅಭಿವೃದ್ಧಿಗೆ ಹೆಬ್ಬಾಳ ಜನರು ಮತ ನೀಡಲಿದ್ದಾರೆ. ಪ್ರತಿಸ್ಪರ್ಧಿಯ ಹಣದ ಆಟ ಇಲ್ಲಿ ನಡೆಯುವುದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಹೆಬ್ಬಾಳ ಕ್ಷೇತ್ರದ ಪ್ರಣಾಳಿಕೆಯನ್ನು ಪ್ರಕಟಿಸಲಾಗುವುದು ಎಂದರು.
Click this button or press Ctrl+G to toggle between Kannada and English